
ಹೊನ್ನಾವರ ಜು24 : 1552 ರಿಂದ 1606 ರವರೆಗೆ 54 ವರ್ಷಗಳ ಕಾಲ ಹೈವ, ತುಳುವ, ಕೊಂಕಣ ಪ್ರದೇಶಗಳನ್ನು ಹೊನ್ನಾವರ-ಗೇರುಸೊಪ್ಪೆಯನ್ನು ಕೇಂದ್ರವಾಗಿಟ್ಟುಕೊಂಡು ಆಳಿದ ವೀರ ರಾಣಿ ಚೆನ್ನಭೈರಾದೇವಿ ಸರ್ವಧರ್ಮ ಸಮನ್ವಯ ಸಾಧಿಸಿದ ಜೈನ್ ಅವಿವಾಹಿತೆ ಮಹಾರಾಣಿಯಾಗಿದ್ದರು. ಪೋರ್ಚುಗೀಸರನ್ನು ಯುದ್ಧದಲ್ಲಿ ಸೋಲಿಸಿ ಉತ್ತರಕ್ಕೆ ಬಂದು ಮತಾಂತರ ಮಾಡಿದ್ದನ್ನು ತಪ್ಪಿಸಿದ್ದರು. ವಿದೇಶಿಯರೊಂದಿಗೆ ಕಾಳುಮೆನಸಿನ ವ್ಯಾಪಾರದಲ್ಲಿ ಏಕಸ್ವಾಮ್ಯ ಹೊಂದಿದ ರಾಣಿ ಹೊನ್ನಾವರ ಬಂದರದಿಂದ ವಿದೇಶಕ್ಕೆ ಮಸಾಲೆ ಸಾಮಾನು ರಫ್ತು ಮಾಡಿ ಪೆಪ್ಪರ್ ಕ್ವೀನ್ ಎಂದು ಪ್ರಸಿದ್ಧಳಾಗಿದ್ದಳು. ಎಲ್ಲ ಸಮಾಜದವರಿಗೆ ಕೃಷಿ, ವ್ಯಾಪಾರ ಮತ್ತು ವ್ಯವಹಾರವನ್ನು ಕಲಿಸಿ ತನ್ನ ಸಾಮ್ರಾಜ್ಯದ ಆದಾಯವನ್ನು ಬೆಳೆಸಿದ್ದಳು. 1606ರಲ್ಲಿ ಕೆಳದಿ ಅರಸರ ಪಿತೂರಿಯಿಂದ ಬಂಧನಕ್ಕೆ ಒಳಗಾಗಿ ಸಾಮ್ರಾಜ್ಯವನ್ನು ಕಳೆದುಕೊಂಡು ಹಳೆ ಇಕ್ಕೇರಿಯ ಕೋಟೆಯಲ್ಲಿ ಬಂಧನದಲ್ಲಿ ಜಿನಪದ್ಧತಿಯಂತೆ ನಿರಾಹಾರ ವ್ರತಧಾರಿಯಾಗಿ ಇಹಲೋಕ ತ್ಯಜಿಸುತ್ತಾಳೆ.

ಕತ್ತಲಲ್ಲಿ ಹೂತು ಹೋಗಿದ್ದ ಮಹಾರಾಣಿಯ ಇತಿಹಾಸವನ್ನು ಬ್ರಿಟಿಷ್ ಕಾಲದ ೩೦೦ ದಾಖಲೆಗಳ ಅಧ್ಯಯನ ಮಾಡಿ ನಾಡಿನ ಹೆಸರಾಂತ ಲೇಖಕ ಗಜಾನನ ಶರ್ಮಾ “ಅಕಳಂಕ ಚರಿತೆಯ ಕರಿಮೆಣಸಿನರಾಣಿ ಚೆನ್ನಭೈರಾದೇವಿ” ಎಂಬ ಕಾದಂಬರಿ ರಚಿಸಿ ರಾಣಿಯನ್ನು ಬೆಳಕಿಗೆ ತಂದಿದ್ದರು. ಈ ಕಾದಂಬರಿಯನ್ನು ಓದಿದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ರಾಣಿಯ ನೆಲವಾದ ಹೊನ್ನಾವರದಲ್ಲಿ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗುವಂತೆ ಥೀಮ್ ಪಾರ್ಕ್ ರಚಿಸಲು ಎರಡು ಎಕರೆ ಭೂಮಿಗಾಗಿ ರಾಣಿಯ ಬಂದರು ಶರಾವತಿ ಸಂಗಮದ ಕಾಸರಕೋಡಿನ ಬಳಿ ಭೂಮಿ ಕೇಳಿದ್ದಾರೆ. ೧೦ ಕೋಟಿ ರೂ.ಗಳ ಯೋಜನೆ ಸಿದ್ಧವಾಗಿದೆ. ಹೆಗ್ಗಡೆಯವರ ಪ್ರಯತ್ನದಿಂದ ಇಂದು ರಾಷ್ಟçಪತಿ ಭವನದಲ್ಲಿ ರಾಷ್ಟçಪತಿಗಳು ಚೆನ್ನಭೈರಾದೇವಿಯ ಅಂಚೆಚೀಟಿ ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾದಂಬರಿಕಾರ ಗಜಾನನ ಶರ್ಮಾ ತಮ್ಮ ಸಂತೋಷವನ್ನು ಈ ರೀತಿ ಬರೆದು ತಿಳಿಸಿದ್ದಾರೆ. ಅದ್ಭುತವಾದ ಕಾರ್ಯಕ್ರಮ. ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮುರವರು, ಖಾವಂದರು, ಪ್ರಹ್ಲಾದ ಜೋಷಿಗಳು, ಪೋಸ್ಟ್ ಮಾಸ್ಟರ್ ಜನರಲ್ಲರು, ಎಕ್ಸಲೆಂಟ್ ಅಕಾಡೆಮಿಯ ಯುವರಾಜ್ ಮತ್ತು ಅವರ ಪತ್ನಿ ರಶ್ಮಿಕಾರವರು…ಎಲ್ಲ ಇದ್ದೆವು. ರಾಷ್ಟ್ರಪತಿಗಳು, ಪ್ರಹ್ಲಾದ ಜೋಶಿಗಳು ಖಾವಂದರು ಅದ್ಭುತವಾಗಿ ಮಾತನಾಡಿದರು. ಭಾರತದ ಇತಿಹಾಸದಲ್ಲಿ ಇಂತಹ ಮಹಿಳೆಯರು ಪ್ರಾಂತ್ಯ ಪ್ರಾಂತ್ಯಗಳಲ್ಲಿ ಅದೆಷ್ಟು ಮಂದಿ ಇದ್ದಾರೋ…ನಾವು ಒಬ್ಬಿಬ್ಬರನ್ನಷ್ಟೇ ಕೊಂಡಾಡಿ, ಇಂತಹ ಮಹಾನ್ ಮಹಿಳೆಯರನ್ನು ಮರೆತುಬಿಟ್ಟಿದ್ದೇವೆ. ಇತಿಹಾಸದ ಮುಖ್ಯ ವಾಹಿನಿಯಿಂದ ಇಂತವರನ್ನು ಬದಿಗಿಟ್ಟು ನಮ್ಮ ಇತಿಹಾಸಕ್ಕೆ ನಾವೇ ಪ್ರಾಮುಖ್ಯತೆ ಕಡಿಮೆ ಮಾಡಿಕೊಂಡಿದ್ದೇವೆ.
ಈಗ ಈ ಮಹಾನ್ ಆಡಳಿತಗಾರ್ತಿ, ವ್ಯವಹಾರ ನಿಪುಣೆ, ದಿಟ್ಟ ಮಹಿಳೆಗೆ ನ್ಯಾಯ ಒದಗುತ್ತಿದೆ. ಅದಕ್ಕೆ ಪ್ರಯತ್ನಿಸಿದ ಎಲ್ಲರಿಗೂ ಅಭಿನಂದನೆ’ ಎಂದರು. ಪ್ರಹ್ಲಾದ ಜೋಶಿಗಳು ಚೆನ್ನಭೈರಾದೇವಿ ಕರ್ನಾಟಕದ ಹೆಮ್ಮೆ. ನಮ್ಮ ಮಕ್ಕಳು ಸಹೋದರಿಯರಿಗೆ ಸ್ಫೂರ್ತಿಯ ಚಿಲುಮೆ. ಐನೂರು ವರ್ಷಗಳ ಹಿಂದೆಯೇ ನಮ್ಮ ಮಹಿಳೆಯರ ಸ್ವಾಯತ್ತತೆ ಮತ್ತು ಆತ್ಮರಕ್ಷಣೆಗೆ ಬೇಕಾದ ಶಿಕ್ಷಣ ಕೊಟ್ಟು ಅವರ ಸಬಲೀಕರಣಕ್ಕೆ ಕಾರಣಳಾದ ಜಿನ ಮಹಿಳೆ. ವಾಣಿಜ್ಯ ವ್ಯವಹಾರದಲ್ಲಿ ನಮ್ಮ ನೆಲಕ್ಕೆ ಸ್ವಾವಲಂಬನೆ ಮತ್ತು ನಿಪುಣತೆ ಗಳಿಸಿಕೊಟ್ಟವಳು. ನೈಪುಣ್ಯದ ಜೊತೆಗೆ ಹೃದಯವಂತಿಕೆ, ಶೌರ್ಯದ ಜೊತೆಗೆ ದಯೆ ಕರುಣೆ ಇಟ್ಟುಕೊಂಡ ಘನ ವ್ಯಕ್ತಿತ್ವ ಆಕೆಯದು ಎಂದರು. ಎಲ್ಲರನ್ನೂ ಸ್ವಾಗತಿಸಿದ ಧರ್ಮಾಧಿಕಾರಿ ಮತ್ತು ಸಂಸದ ಪೂಜ್ಯ ವೀರೇಂದ್ರ ಹೆಗಡೆವರು, ಇತಿಹಾಸದ ಗರ್ಭದಲ್ಲಿ ಅಡಗಿಹೋದ ಚೆನ್ನಭೈರಾದೇವಿಯಂತಹ ವ್ಯಕ್ತಿತ್ವಕ್ಕೆ ಇಂದು ನ್ಯಾಯ ಸಂದಾಯವಾಗುತ್ತಿದೆ ಎಂಉ ಹೇಳಿ ಎಲ್ಲರನ್ನೂ ಸ್ವಾಗತಿಸಿದರು ನಂತರ ಪೋಸ್ಟ್ ಮಾಸ್ಟರ್ ಜನರಲ್ ಜೊತೆಯಲ್ಲಿ ರಾಷ್ಟ್ರಪತಿಗಳು ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು…. ಸರ್, ನಂಗೆ ನಿಜಕ್ಕೂ ಸಂತೃಪ್ತಿಯ ಭಾವ. ಎಲ್ಲಿಂದೆಲ್ಲಿಗೆ ತಲುಪ್ತು ರಾಣಿಯ ಸಾಧನೆ. ಹುಕ್ಕಲು ಪರದೇಶಿ ಮಾಣಿಗೆ ರಾಷ್ಟçಪತಿ ಭವನದ ತನಕ ಕರ್ಕೊಂಡು ಹೋದ ರಾಣಿ ಒಂದು ತರ ಧನ್ಯತೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದ. ನನಗೆ ನಿಜಕ್ಕೂ ಸಂತೃಪ್ತಿಯ ಭಾವ ಎಂದು ಹೇಳಿದ್ದಾರೆ.
ಚೆನ್ನಭೈರಾದೇವಿ ಆಳಿದ ನೆಲದಲ್ಲಿ ಅವಳ ನೆನಪಿಗೆ ಎರಡು ಎಕರೆ ಭೂಮಿ ಕೊಡಿಸಲಾರದ ಅಸಮರ್ಥರು ಎಂಬ ಅಸಮರ್ಥರು ಎಂಬ ಕಳಂಕ ಬರದಿರುವಂತೆ ಜಿಲ್ಲೆಯ ರಾಜಕಾರಣಿಗಳು ಭೂಮಿ ಕೊಡಸಬೇಕಾಗಿದೆ. ಜಿಲ್ಲೆಯ ರಾಣಿ ಚೆನ್ನಭೈರಾದೇವಿ ರಾಷ್ಟçಪತಿ ಭವನದಲ್ಲಿ ಬೆಳಕು ಕಾಣುವಂತೆ ಆಗಿದ್ದಕ್ಕೆ ಡಾ. ವೀರೇಂದ್ರ ಹೆಗ್ಗಡೆ ಬಳಗವನ್ನು ಉತ್ತರಕನ್ನಡದ ಜನ, ಕನ್ನಡಿಗರು ಹೃದಯ ತುಂಬಿ ಅಭಿನಂದಿಸಬೇಕಾಗಿದೆ.
