
ಜೋಯಿಡಾ: ತಮ್ಮ ಹೊಲದಿಂದ ಮನೆಗೆ ಹಿಂದಿರುಗುತ್ತಿದ್ದ ರೈತನ ಮೇಲೆ ಕರಡಿಯು ದಾಳಿ ನಡೆಸಿದ ಪರಿಣಾಮ, ರೈತನಿಗೆ ತೀವ್ರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯಲ್ಲಿ ನಡೆದಿದೆ.

ಗಾಯಗೊಂಡ ರೈತನನ್ನು ಮಾರುತಿ ಮಳೇಕರ್ (45) ಎಂದು ಗುರುತಿಸಲಾಗಿದೆ. ಮಾರುತಿ ಅವರು ಸಿರಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾನೆಗಾಳಿಯಲ್ಲಿರುವ ತಮ್ಮ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭ, ಸಂಜೆ ಸುಮಾರು 6 ಗಂಟೆ ಸುಮಾರಿಗೆ ಕರಡಿಯು ಏಕಾಏಕಿ ದಾಳಿ ನಡೆಸಿದೆ.
ಈ ದಾಳಿಯಲ್ಲಿ ಮಾರುತಿ ಅವರ ತಲೆ, ಕೈ ಹಾಗೂ ಕಾಲುಗಳಿಗೆ ತೀವ್ರ ಗಾಯವಾಗಿದ್ದು, ಆಳವಾದ ರಕ್ತಸ್ರಾವವೂ ಕಂಡುಬಂದಿದೆ. ಆದರೂ ಮಾರುತಿ ಮನೆಗೆ ತಲುಪಲು 4 ಕಿ.ಮೀ ನಡೆದು ಬಂದಿದ್ದಾರೆ ಎನ್ನಲಾಗಿದೆ.
ತಕ್ಷಣ ಅವರನ್ನು ರಾಮನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.



