1800ರ ಗಡಿ ದಾಟಿದ ಲಿಂಗನಮಕ್ಕಿ-ಭರ್ತಿಯಾಗಲು ಕೇವಲ 18 ಅಡಿ ಬಾಕಿ

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯದ ಮಟ್ಟ 1801.15 ಅಡಿಗಳಿಗೆ ಏರಿಕೆಯಾಗಿದೆ. ಜಲಾಶಯದ ಒಳಹರಿವಿನ ಮಟ್ಟ 24,554 ಕ್ಯೂಸೆಕ್‌ ಇದ್ದು, ನಿನ್ನೆಗಿಂತ ಕಡಿಮೆಯಾಗಿದೆ. ಇನ್ನೂ ಜಲಾಶಯ ಭರ್ತಿಯಾಗಲು ಕೇವಲ 18 ಅಡಿ ಬಾಕಿಯಿದ್ದು ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ…



ಲಿಂಗನಮಕ್ಕಿ ಜಲಾನಯದ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಮಟ್ಟ 1801.15 ಅಡಿಗಳಿಗೆ ಏರಿಕೆಯಾಗಿದೆ. ನಿನ್ನೆ 1801.10 ಅಡಿಗಳಿತ್ತು. ಒಳಹರಿವು 24,554 ಕ್ಯೂಸೆಕ್‌ ಇದ್ದು ನಿನ್ನೆಗಿಂತ ಕಡಿಮೆಯಾಗಿದೆ. ಪೂರ್ತಿ ಭರ್ತಿಯಾಗಲು ಕೇವಲ 18 ಅಡಿ ಬಾಕಿಯಿದೆ. ಆಣೆಕಟ್ಟಿನ ಸಂಗ್ರಹಾಲಯದ 66 ರಷ್ಟು ಭರ್ತಿಯಾಗಿದೆ. ಈ ಎರಡು ಕಾರಣಗಳಿಂದ ಕೆಪಿಸಿ ಎಂದಿನಂತೆ ಹೊನ್ನಾವರ ತಾಲೂಕಿನ ಶರಾವತಿ ಕೊಳ್ಳದ ಜನತೆಗೆ ನೀರು ಬಿಡುವ ಪ್ರಥಮ ನೋಟೀಸು ನೀಡಲು ಸಜ್ಜಾಗಿದೆ.

ಆಣೆಕಟ್ಟು ಶೇ. 65-75-85 ಅಡಿ ತುಂಬಿದಾಗ ಎಚ್ಚರಿಕೆಯ ನೋಟೀಸು ನೀಡುವ ಪದ್ಧತಿಯಂತೆ ಇಂದು ಪ್ರಥಮ ನೋಟೀಸು ಜಾರಿಯಾಗಿದೆ. ನೆರೆಯ ಅಪಾಯ ತಪ್ಪಿಸಲು 1815 ಅಡಿ ದಾಟುವ ಮೊದಲು ಅಥವಾ ನಂತರ ಜಲಾನಯನ ಪ್ರದೇಶದ ಮಳೆಯ ಹೆಚ್ಚಳದ ಸಾಧ್ಯತೆ ಮತ್ತು ಆಣೆಕಟ್ಟಿನ ಒಳಹರಿವನ್ನು ಅಂದಾಜಿಸಿ ಸ್ವಲ್ಪ ಸ್ವಲ್ಪ ನೀರನ್ನು ಬಿಟ್ಟು ನಿಧಾನವಾಗಿ ಗರಿಷ್ಠ ಮಟ್ಟವನ್ನು ಮುಟ್ಟುತ್ತದೆ. ಆಣೆಕಟ್ಟಿನಿಂದ ಎಷ್ಟು ನೀರು ಬಿಟ್ಟರೆ ಶರಾವತಿ ಕೊಳ್ಳದಲ್ಲಿ ಎಷ್ಟು ನೀರು ಏರುತ್ತದೆ ಎಂಬುದು ಜನಸಾಮಾನ್ಯರಿಗೆ ತಿಳಿಯಲು ಎರಡೂ ದಂಡೆಗಳಲ್ಲಿ ಮರ ಹಾಗೂ ಕಟ್ಟಡಗಳ ಮೇಲೆ ವಿವಿಧ ಬಣ್ಣಗಳಿಂದ ಗುರುತು ಮಾಡಲಾಗಿದೆ.

ಆಣೆಕಟ್ಟು ಶೇ. 80 ರಷ್ಟು ತುಂಬಿದಾಗ ಮುನ್ಸೂಚನೆ ಇಲ್ಲದೇ ನೀರು ಬಿಡುವುದಾಗಿ ನೋಟೀಸಿನಲ್ಲಿ ಹೇಳಿದ್ದರೂ ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸಿ, ಶರಾವತಿ ದಂಡೆಗಳಲ್ಲಿ ಧ್ವನಿವರ್ಧಕದಿಂದ ತಿಳಿಸಿ ನೀರು ಬಿಡಲಾಗುತ್ತದೆ. ಅರಬ್ಬೀ ಸಮುದ್ರದ ಇಳಿತದ ಸಮಯದಲ್ಲಿ ನೀರು ಬರುವಂತೆ ಸಮಯ ನಿಗದಿಪಡಿಸಿ ಬಿಡಲಾಗುತ್ತದೆ. ಲಿಂಗನಮಕ್ಕಿಯಿಂದ ಬಿಟ್ಟ ನೀರು ಗೇರುಸೊಪ್ಪ ಟೇಲರೀಸ್‌ಗೆ ಬಂದು ಮೊದಲೇ ತೆರವಾಗಿಟ್ಟುಕೊಂಡ ಈ ಆಣೆಕಟ್ಟಿನ 56ಮೀ. ತುಂಬಿಸಿ ನಂತರ ನೀರು ಬಿಡುವಾಗ 6 ತಾಸು ಅಂತರ ಇರುತ್ತದೆ.


ತುರ್ತು ಸಂದರ್ಭದಲ್ಲಿ ಈ ಅವಧಿಯಲ್ಲಿ ಜನ ಸುರಕ್ಷಿತ ಸ್ಥಳ ಸೇರಬಹುದಾಗಿದೆ. ಇದು ಕೆಪಿಸಿ ಜನರ ಸುರಕ್ಷತೆಗಾಗಿ ಮಾಡಿದ ವ್ಯವಸ್ಥೆ. ಗೇರುಸೊಪ್ಪೆಯಿಂದ ಹೊನ್ನಾವರದ ಮಧ್ಯೆ ಕಲ್ಕಟ್ಟೆ, ಮಾಗೋಡ, ಹಡಿನಬಾಳ, ಭಾಸ್ಕೇರಿ ಹೊಳೆಗಳ ನೀರು ಶರಾವತಿಗೆ ಸೇರುವುದರಿಂದ ಕೊಳ್ಳದಲ್ಲಿ ಮಳೆ ಇದ್ದರೆ ಪ್ರವಾಹ ಲೆಕ್ಕಾಚಾರ ತಲೆಕೆಳಗಾಗುತ್ತದೆ.

ಕಳೆದ ವರ್ಷ ಇದೇ ದಿನ ಲಿಂಗನಮಕ್ಕಿ ಆಣೆಕಟ್ಟು 1782.15 ಅಡಿ ಇತ್ತು. ಆಣೆಕಟ್ಟು 38.45 ತುಂಬಿತ್ತು. ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ನೀರು ಈಗ ಲಿಂಗನಮಕ್ಕಿಯಲ್ಲಿ ತುಂಬಿ ನಿಂತಿದೆ. 1800 ರ ನಂತರ ಶರಾವತಿ ಜಲಸಂಗ್ರಹ ಕ್ಷೇತ್ರ ವಿಶಾಲವಾಗುವುದರಿಂದ ನಿತ್ಯ 12 ತಾಸು ಮಳೆ ಸುರಿದರೆ ದಿನಕ್ಕೆ 1-2 ಅಡಿ ಏರಬಹುದು ಎಂದು ಲೆಕ್ಕ ಹಾಕಿದರೆ ಇನ್ನು ಒಂದು ವಾರದಲ್ಲಿ ಲಿಂಗನಮಕ್ಕಿ ತುಂಬುತ್ತದೆ. 80 ರ ದಶಕದಲ್ಲಿ ಕೆಪಿಸಿ ಗರಿಷ್ಠ 1817 ತುಂಬಿದರೂ ನೀರು ಬಿಡದೇ ಇದ್ದಾಗ ಶರಾವತಿ ಕೊಳ್ಳದಲ್ಲಿ ಭಾರೀ ಮಳೆಯಾಗಿ 4 ಲಕ್ಷ ಕ್ಯೂಸೆಕ್‌ ನೀರು ಹರಿದು ಬಂದು ಒಂದೇ ದಿನದಲ್ಲಿ 4 ಅಡಿ ನೀರು ಹೆಚ್ಚಾದಾಗ ಅನಿವಾರ್ಯವಾಗಿ ಎಲ್ಲ ಗೇಟುಗಳನ್ನು ತೆರೆದು ನೀರು ಬಿಟ್ಟಾಗ ಜಲಪಾತ ಭೋರ್ಗರೆದಿತ್ತು.

ಅಷ್ಟೇ ಅಲ್ಲದೇ ಶರಾವತಿ ಕೊಳ್ಳದ ಎರಡು ದಂಡೆ ವಿಸ್ತಾರಗೊಂಡು ಊರಿಗೆ ನೀರು ನುಗ್ಗಿ ಅಪಾರ ಹಾನಿಯಾಗಿತ್ತು. ಶಿವಮೊಗ್ಗ ಜಿಲ್ಲೆಯ ತ್ಯಾಜ್ಯವೆಲ್ಲ ಪ್ರವಾಹದೊಂದಿಗೆ ಬಂದು ಅರಬ್ಬೀ ಸಮುದ್ರದ ದಂಡೆಗೆ ಆಳೆತ್ತರದ ರಾಶಿ ಬಿದ್ದಿತ್ತು. ಇನ್ನು ಅಂತಹದು ಘಟಿಸುವುದಿಲ್ಲ. ಸ್ವಲ್ಪ ನೀರು ಬಿಟ್ಟರೂ ಜೋಗ ಅಬ್ಬರಿಸುವುದು, ಪ್ರವಾಸಿಗರು ಪ್ರವಾಹದಂತೆ ಬರುವುದು ನಿರೀಕ್ಷಿತ.