ಅಂದರ್ ಬಾಹರ್ ಜೂಜಾಟದ ದಾಳಿ: 10 ಮಂದಿ ವಿರುದ್ಧ ಪ್ರಕರಣ, ₹2.04 ಲಕ್ಷ ಮೌಲ್ಯದ ವಸ್ತು ವಶ

ಭಟ್ಕಳ: ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಮಾವಿನಕುರ್ವೆ ಬಂದರು ಬಳಿ ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ 10 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, ₹2.04 ಲಕ್ಷ ಮೌಲ್ಯದ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರಿಗೆ ಲಭಿಸಿದ್ದ ಖಚಿತ ಮಾಹಿತಿಯದಂತೆ, ಜೂಜಾಟದಲ್ಲಿ ಹಣ ಪಣವಾಗಿ ಕಟ್ಟಿ ಇಸ್ಪೀಟ್ ಎಲೆಗಳ ಮೂಲಕ ಅಂದರ್ ಬಾಹರ್ ಆಟವಾಡುತ್ತಿದ್ದಾಗ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯ ವೇಳೆ ರಾಘವೇಂದ್ರ ಖಾರ್ವಿ, ನಾಗೇಶ ಖಾರ್ವಿ, ಸನಾವುಲ್ಲಾ, ಗೋವಿಂದ ಖಾರ್ವಿ, ಮೋಹನ ದೇವಾಡಿಗ, ಶ್ರೀನಿವಾಸ ಖಾರ್ವಿ, ರಾಮಚಂದ್ರ ನಾಯ್ಕ ಹಾಗೂ ಪಾಂಡುರಂಗ ಖಾರ್ವಿ ಎಂಬವರು ಪೊಲೀಸರ ವಶಕ್ಕೆ ಬಿದ್ದಿದ್ದಾರೆ. ಇನ್ನುಳಿದ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.

ಪೊಲೀಸರು ಆರೋಪಿಗಳಿಂದ ₹4,938 ನಗದು, ಇಸ್ಪೀಟ್ ಕಾರ್ಡ್‌ಗಳು ಮತ್ತು ತಲಾ ₹50,000 ಮೌಲ್ಯದ ನಾಲ್ಕು ಮೋಟಾರ್ ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ವಶಪಡಿಸಿಕೊಂಡ ವಸ್ತುಗಳ ಮೌಲ್ಯ ₹2,04,938 ಎಂದು ಅಂದಾಜಿಸಲಾಗಿದೆ.

ಘಟನೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಪ್ರಶಂಸಿಸಿದ್ದಾರೆ.