ಚಿನ್ನದ ಪದಕ ಪಡೆದ ಉಪ ವಲಯ ಅರಣ್ಯಾಧಿಕಾರಿ ಗುರುರಾಜ

ಜೊಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುರಾಜ ಸಾತು ಗೌಡ ಅವರು 2024 ನೇ ಸಾಲಿನ ಅರಣ್ಯ ಇಲಾಖೆಯ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ವನ್ಯಜೀವಿ ಸಂರಕ್ಷಣೆಯಲ್ಲಿ ಅಗಾಧ ಸೇವೆಯನ್ನು ಸಲ್ಲಿಸಿದ್ದ ಗುರುರಾಜ ಗೌಡ ಮುಖ್ಯವಾಗಿ 200 ಕ್ಕೂ ಹೆಚ್ಚಿನ ಜೇಡಗಳನ್ನು, 180 ಕ್ಕೂ ಪಕ್ಷಿಗಳನ್ನು, 60 ಕ್ಕೂ ಹೆಚ್ಚು ಏರೋಪ್ಲೇನ್ ಚಿಟ್ಟೆ, 60 ಕ್ಕೂ ಹೆಚ್ಚು ಚಿಟ್ಟೆ, 40 ಕ್ಕೂ ಹೆಚ್ಚು ಕಪ್ಪೆ, 40 ಕ್ಕೂ ಹೆಚ್ಚು ಹಾವು ಹಾಗೂ ಇನ್ನಿತರ ಅನೇಕ ಸಸ್ಯ ಪ್ರಾಣಿಗಳನ್ನು ಗುರುತಿಸುವ ಅಗಾಧ ಜ್ಞಾನವನ್ನು ಹೊಂದಿದ್ದು, ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮದೇ ವಿಶಿಷ್ಟ ಚಾಪು ಮೂಡಿಸಿದ್ದ ಅವರ ಪ್ರತಿಯೊಂದು ವನ್ಯಜೀವಿ ಕುರಿತಾದ ವಿಶ್ಲೇಷಣೆಗಳು ಕೌತುಕತೆಯಿಂದ ಕೂಡಿರುತ್ತವೆ.

ಗುರುರಾಜ್ ಗೌಡ ಅವರು ಮೂಲತಃ ಅಂಕೋಲದವರಾಗಿದ್ದು ಇವರ ತಂದೆಯವರಾದ ಸಾತು ಎಸ್ ಗೌಡ ಜೋಯಿಡಾದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸಿದ್ದು 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಜೋಯಿಡಾದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಸದ್ಯ ಕೆ.ಟಿ.ಆ‌ರ್ ನ ಜೋಯಿಡಾ ತಾಲೂಕಿನ ಅಂಬೋಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಮುಖ್ಯಮಂತ್ರಿಗಳ ಪದಕ ದೊರೆತಿದ್ದು ಜೋಯಿಡಾ ಜೊತೆಗೆ ಅಂಕೋಲಾ ತಾಲೂಕಿನ ಜನತೆ ಕೂಡ ಹೆಮ್ಮೆ ಪಡುವಂತಾಗಿದೆ. ಡಿ ಎಪ್ ಓ ನೀಲೇಶ್ ಶಿಂಧೆ ಹಾಗೂ ಅರಣ್ಯ ಇಲಾಕೆ, ಕೆ ಟಿ ಆರ್ ನ ಉಪ ವಲಯ ಅರಣ್ಯಾಧಿಕಾರಿಗಳ ಸಂಘವು ಇವರನ್ನು ಅಭಿನಂದಿಸಿದ್ದು, ಇನ್ನು ಹೆಚ್ಚಿನ ಪ್ರಶಸ್ತಿ ಇವರಿಗೆ ಲಭಿಸಲಿ ಎಂಬುವುದು ನಮ್ಮೇಲ್ಲರ ಆಶಯವಾಗಿದೆ.