ಬೈಕ್-ಬಸ್ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ

ಹಳಿಯಾಳ: ರವಿವಾರ ಸಂಜೆ ದೊಡ್ಡಕೊಪ್ಪ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ದೊಡ್ಡಕೊಪ್ಪ ಗ್ರಾಮದ ನಿವಾಸಿ ನಿಂಗಪ್ಪ ಸುರೇಶ ಗಾಡೇಕರ (39) ಎಂದು ಗುರುತಿಸಲಾಗಿದೆ.

ಅವರು ದೊಡ್ಡಕೊಪ್ಪದಿಂದ ಬಂಟರಗಾಳಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಗುಂಡಪ್ಪ ಈಶ್ವರ ಸಿಂಧೆ ಅವರ ಹೊಲದ ಬಳಿ ಇರುವ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ನಿಯಂತ್ರಣ ತಪ್ಪಿದ ಬೈಕ್, ಎದುರಿನಿಂದ ಬರುತ್ತಿದ್ದ ಬಸ್‌ನ ಮುಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ನಿಂಗಪ್ಪ ಗಾಡೇಕರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ.

ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.