ಶಿರಸಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಿದರೂ, ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ ಹೋರಾಟ 31 ವರ್ಷಗಳಾದರೂ, ಅರಣ್ಯ ಭೂಮಿ ಹಕ್ಕಿನ ಸ್ವಾತಂತ್ರ್ಯ ಮರಿಚಿಕೆ ಆಗುತ್ತಿರುವುದು
ವಿಷಾದಕರ ಎಂದು ಹೋರಾಟಗಾರ ರವೀಂದ್ರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಜನಸಂಖ್ಯೆಯ ಒಂದು ಮೂರರಷ್ಟು ಅರಣ್ಯವಾಸಿಗಳು ವಾಸ್ತವ್ಯ ಮತ್ತು ಸಾಗುವಳಿಗಾಗಿ ಸುಮಾರು ಎಂಭತ್ತೈದು ಸಾವಿರ ಅರಣ್ಯವಾಸಿ ಕುಟುಂಬಗಳು ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಸರ್ವೋಚ್ಛ ನ್ಯಾಯಾಲಯದಲ್ಲಿ ರಾಜ್ಯ ಸರಕಾರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಲಾಗುವುದೆಂದು ಈಗಾಗಲೇ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿರುವುದರಿಂದ ಒಕ್ಕಲೇಳಿಸುವ ಆತಂಕದಲ್ಲಿ ಅರಣ್ಯವಾಸಿಗಳು ಸ್ವಾತಂತ್ರೋತ್ಸವ ಆಚರಿಸಿಕೊಂಡಿದ್ದಾರೆ.
ಇಚ್ಛಾಶಕ್ತಿ ಹಾಗೂ ಕಾನೂನು ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಕಾನೂನು ಜ್ಞಾನದ ಕೊರತೆಯಿಂದ ಭೂಮಿ ಹಕ್ಕಿನ ಪ್ರಗತಿಯಲ್ಲಿ ಹಿನ್ನಡೆಯಾಗಿದೆ. ನಿರಂತರ 31 ವರ್ಷ ಹೋರಾಟಕ್ಕೆ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಸರಕಾರ ಭೂಮಿ ಹಕ್ಕಿಗಾಗಿ ಹೊಸ ಅರಣ್ಯ ನೀತಿ ಜಾರಿಗೊಳಿಸಬೇಕಾಗಿದೆ. ಇಲ್ಲದಿದ್ದಲ್ಲಿ ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿ ಉತ್ತರ ಕನ್ನಡ ಜಿಲ್ಲೆ ನಿರಾಶ್ರಿತರ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.