ನವದೆಹಲಿ, ಜೂನ್ 30: ಕರ್ಣಾಟಕ ಬ್ಯಾಂಕ್ನ ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು ಕಾರ್ಯವಾಹಕ ನಿರ್ದೇಶಕ ಶೇಖರ್ ರಾವ್ ಅವರು ರಾಜೀನಾಮೆ ನೀಡಿದ್ದಾರೆ. ನಿನ್ನೆ ಶನಿವಾರ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಸಂಸ್ಥೆಯು ಈ ವಿಚಾರವನ್ನು ಬಹಿರಂಗಪಡಿಸಿದೆ. ಆದರೆ, ಈ ಇಬ್ಬರು ಟಾಪ್ ಎಕ್ಸಿಕ್ಯೂಟಿವ್ಗಳ ರಾಜೀನಾಮೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.

ವೈಯಕ್ತಿಕ ಕಾರಣ ನೀಡಿ ಇಬ್ಬರೂ ಸಂಸ್ಥೆಯಿಂದ ಹೊರಬರುತ್ತಿದ್ದಾರೆ. ಸಿಇಒ ಶ್ರೀಕೃಷ್ಣನ್ ಅವರು ಜುಲೈ 15ರವರೆಗೂ ಕಂಪನಿಯಲ್ಲಿ ಇರಲಿದ್ದಾರೆ. ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಜುಲೈ 31ರಂದು ಬ್ಯಾಂಕ್ನಿಂದ ನಿರ್ಗಮಿಸಲಿದ್ದಾರೆ.
ಈ ಬೆಳವಣಿಗೆ ಆದ ಬೆನ್ನಲ್ಲೇ ಇಂದು ಸೋಮವಾರ ಕರ್ಣಾಟಕ ಬ್ಯಾಂಕ್ನ ಷೇರು ಬೆಲೆ ತೀವ್ರ ಕುಸಿತಕ್ಕೆ ಸಿಲುಕಿದೆ. ಈ ವರದಿ ಬರೆಯುವ ವೇಳೆ ಅದರ ಷೇರುಬೆಲೆ ಇವತ್ತು ಶೇ. 5ರಷ್ಟು ಕಡಿಮೆ ಆಗಿದೆ. 207.65 ರೂ ಇದ್ದ ಬೆಲೆ ಈಗ 193 ರೂಗೆ ಕುಸಿದಿದೆ. ಇವತ್ತಿನ ಟ್ರೇಡಿಂಗ್ ಅವಧಿಯ ಒಂದು ಹಂತದಲ್ಲಿ ಷೇರುಬೆಲೆ 190 ರೂಗೆ ಕುಸಿದಿತ್ತು.
ದಿಢೀರ್ ರಾಜೀನಾಮೆಗೆ ಏನು ಕಾರಣ ಇರಬಹುದು?
ಆಗಲೇ ತಿಳಿಸಿದಂತೆ ಸಿಇಒ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಅವರುಗಳ ರಾಜೀನಾಮೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಳೆದ ತಿಂಗಳಷ್ಟೇ ಆಡಿಟಿಂಗ್ ವೇಳೆ ಒಂದೂವರೆ ಕೋಟಿ ರೂ ವಹಿವಾಟಿನಲ್ಲಿ ವ್ಯತ್ಯಾಸ ಆಗಿರುವುದು ಬೆಳಕಿಗೆ ಬಂದಿತ್ತು. ಕನ್ಸಲ್ಟೆಂಟ್ ಸೇವೆ ಹಾಗೂ ಇತರ ಉದ್ದೇಶಗಳಿಗೆ ನಿರ್ದೇಶಕರು 1.53 ಕೋಟಿ ರೂ ವ್ಯಯಿಸಿದ್ದರು. ಈ ವೆಚ್ಚಕ್ಕೆ ಬೋರ್ಡ್ನ ಅನುಮತಿ ಇರಲಿಲ್ಲ. ಈ ವಿಷಯವನ್ನು ಸರ್ಕಾರದಿಂದ ನೇಮಕ ಮಾಡಲಾದ ಲೆಕ್ಕಪರಿಶೋಧಕರು ಎತ್ತಿ ತೋರಿಸಿದ್ದದರು. ಈ ಕಾರಣಕ್ಕೆ ಸಿಇಒ ಮತ್ತು ಇಡಿ ಅವರು ರಾಜೀನಾಮೆ ಕೊಟ್ಟರಾ ಎಂಬುದು ಸ್ಪಷ್ಟವಾಗಿಲ್ಲ.
ತಂತ್ರಜ್ಞಾನ ಸುಧಾರಣೆ, ಸಾಲ ವಿಭಾಗದಲ್ಲಿ ಸುಧಾರಣೆ ಕಾರ್ಯಗಳಿಗೆ ಹೊರಗಿನಿಂದ ಕನ್ಸಲ್ಟೆನ್ಸಿ ಸರ್ವಿಸ್ ಪಡೆಯಲು ಈ ವೆಚ್ಚ ಮಾಡಲಾಗಿರುವುದು ಗೊತ್ತಾಗಿದೆ.
ಶ್ರೀಕೃಷ್ಣನ್ ಹರಿಹರ ಶರ್ಮಾ ಅವರು 2023ರ ಮೇ ತಿಂಗಳಲ್ಲಿ ಕರ್ಣಾಟಕ ಬ್ಯಾಂಕ್ನ ಸಿಇಒ ಆಗಿ ನೇಮಕವಾಗಿದ್ದರು. ಹೊರಗಿನಿಂದ ಆ ಬ್ಯಾಂಕ್ನ ಸಿಇಒ ಆದ ಮೊದಲ ವ್ಯಕ್ತಿ ಎನಿಸಿದ್ದಾರೆ. ಮೂರು ವರ್ಷದ ಅವಧಿಗೆಂದು ಅವರನ್ನು ನೇಮಕ ಮಾಡಲಾಗಿತ್ತು. ಇನ್ನು ಒಂದು ವರ್ಷ ಇರುವಂತೆಯೇ ಅವರೇ ಖುದ್ದಾಗಿ ನಿರ್ಗಮಿಸುತ್ತಿದ್ದಾರೆ.


