ಸ್ವರ್ಣವಲ್ಲಿಯಲ್ಲಿ ಶ್ರೀಕೃಷ್ಣನಿಗೆ ಆರು ಲಕ್ಷ ತುಳಸಿ ಅರ್ಚನೆ

ಶಿರಸಿ: ಭಗವದ್ಗೀತೆಯ ಮೂಲಕ ನಾಡಿನ ಉದ್ದಗಲಕ್ಕೂ ಅಭಿಯಾನ‌ ನಡೆಸುತ್ತಿರುವ ಸೋಂದಾ ಸ್ವರ್ಣವಲ್ಲೀ ‌ಮಹಾ‌ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿಗಳ ಸಾನ್ನಿಧ್ಯದಲ್ಲಿ ಶ್ರೀಕೃಷ್ಣನಿಗೆ ಆರು ‌ಲಕ್ಷ ತುಳಸಿಯಿಂದ ಅರ್ಚನೆ ನಡೆಸಲಾಯಿತು.

ಕಿಸಲವಾಡ, ಕರೂರು, ಸೋಂದಾ ಕಸಬ, ಭರತನಳ್ಳಿ, ತೋಟದ ಹಾಗೂ ಮತ್ತಿತರ ಸೀಮೆಗಳಿಂದ ತರಿಸಲಾಗಿದ್ದ ತುಳಸಿಯನ್ನು 230 ಕ್ಕೂ ಅಧಿಕ ವೈದಿಕರ ಸಮ್ಮುಖದಲ್ಲಿ ಕೇಶವ ಹೆಗಡೆ ಯಜಮಾನತ್ವದಲ್ಲಿ ತುಳಸಿ ಅರ್ಚನೆ ನೆರವೇರಿತು. ವೈದಿಕರಾಗಿ ನರಸಿಂಹ ಜೊಯಿಸರು, ಚಿನ್ಮಯ ಜೊಯಿಸರು, ನಾಗರಾಜ್ ಭಟ್ಟ, ಮಹಾಬಲೇಶ್ವರ ಭಟ್ಟ, ವಿನಾಯಕ ಭಟ್ಟ ಇತರರು ನೇತೃತ್ವ ವಹಿಸಿದ್ದರು.

ಶ್ರೀಗಳು ಆಶೀರ್ವಚನ ನುಡಿದು, ಶ್ರೀಕೃಷ್ಣನ‌ ಜನ್ಮಾಷ್ಠಮಿ ದೇಶದ ಎಲ್ಲಡೆ ಮಾತ್ರವಲ್ಲ, ವಿಶ್ವದೆಲ್ಲಡೆ ನಡೆಯುತ್ತಿದೆ. ಅವನ ಪೂಜೆ ಬಿಟ್ಟರೆ ಹೆಚ್ಚು ನಡೆಯುವದು ಅವನ ನಾಮ ಕೀರ್ತನೆಯೆ. ಇಂದು ಆರು‌ ಲಕ್ಷ ತುಳಸೀ ದಳದಿಂದ ಅರ್ಚನೆ ನಡೆದಿದೆ. ನಾಮ ಕೀರ್ತನೆಯ ಪರ್ವ ಕಾಲ ಶ್ರೀಕೃಷ್ಣನ ಜನ್ಮೋತ್ಸವ ಎಂದರು.

ಕಾರ್ಗಿಲ್ ಯುದ್ಧ ಸಮಯದಲ್ಲಿ ಭಾರತೀಯ ಸೇನೆ ಹಾಗೂ ರಾಷ್ಟ್ರದ ಕ್ಷೇಮ ಮತ್ತು ಅಭ್ಯುದಯದ ಸಂಕಲ್ಪದೊಂದಿಗೆ ಶ್ರೀಗಳವರ ಅಪೇಕ್ಷೆ ಮತ್ತು ಅನುಜ್ಞೆಯಂತೆ ಪ್ರಾರಂಭವಾದ ಈ ಕೈಂಕರ್ಯವನ್ನು ಪ್ರತೀ ಶ್ರೀಕೃಷ್ಣಾಷ್ಠಮಿಯಂದು ನೆರವೇರಿಸಲಾಗುತ್ತಿದೆ ಎಂಬುದು ಉಲ್ಲೇಖನೀಯ.