65 ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಕೆನಡಾದ ಹ್ಯಾಲಿಪ್ಯಾಕ್ಸ್ ನಲ್ಲಿ ಆ. 22 ರಿಂದ 26 ರವರೆಗೆ ನಡೆಯಲಿರುವ 65 ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳುತ್ತಿದ್ದಾರೆ.

ಕಾಗೇರಿ, ಕಾಮನ್ವೆಲ್ತ್ ಸಂಸದೀಯ ಸಂಘದ ಕರ್ನಾಟಕ ಶಾಖೆಯ ಜಂಟಿ ಅಧ್ಯಕ್ಷರೂ ಆಗಿದ್ದಾರೆ. ಈ ಸಮ್ಮೇಳನದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಸಂಸತ್ತಿನ ಪಾತ್ರ ಹಾಗೂ ಹವಾಮಾನ ತುರ್ತುಸ್ಥಿತಿ ಹಾಗೂ ಸಂಸತ್ತುಗಳ ಸರ್ಕಾರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತವೆಯೇ ಎಂಬ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

ಸಮ್ಮೇಳನದಲ್ಲಿ ಭಾರತದ ವಿವಿಧ ರಾಜ್ಯಗಳ ಪೀಠಾಸೀನಾಧಿಕಾರಿಗಳು, ಲೋಕಸಭಾಧ್ಯಕ್ಷ ಓಂ ಬಿರ್ಲಾ ನೇತೃತ್ವದ ನಿಯೋಗದೊಂದಿಗೆ ಭಾಗವಹಿಸುತ್ತಿದ್ದಾರೆ. ಈ ಸಮ್ಮೇಳನದಲ್ಲಿ ಪ್ರಪಂಚದಲ್ಲಿನ ಸುಮಾರು 68 ಕಾಮನ್ವೆಲ್ತ್ ದೇಶಗಳ ಪ್ರತಿನಿಧಿಗಳು ಸಹ ಭಾಗವಹಿಸಲಿರುವರು. ಸಭಾಧ್ಯಕ್ಷರು ಸಮ್ಮೇಳನದ ಪೂರ್ವದಲ್ಲಿ ಹಾಗೂ ನಂತರ ಪ್ರಾನ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ನಲ್ಲಿ ಒಟ್ಟು ಐದು ದಿನಗಳ ಅಧ್ಯಯನ ಪ್ರವಾಸವನ್ನು ಕೈಗೊಂಡು ಸೆಪ್ಟಂಬರ್ 4 ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.