ಕುಮಟಾ: ಪಟ್ಟಣ ವ್ಯಾಪ್ತಿಯಲ್ಲಿ ಬೀದಿದೀಪಗಳು ಹದಗೆಟ್ಟು ವರ್ಷ ಕಳೆದರೂ ಸರಿಪಡಿಸುವ ಕಾರ್ಯ ನಡೆಯುತ್ತಿಲ್ಲ. ವಾರ್ಡ್ ಜನರಿಂದ ನಾವು ಹೇಳಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಭೆಯಲ್ಲಿ ಪುರಸಭಾ ಸದಸ್ಯರು ಆಕ್ರೋಶಗೊಂಡರು. ಪಟ್ಟಣದ ರಾ. ರಾ. ಅಣ್ಣಾ ಪೈ ಸಭಾಭವನದಲ್ಲಿ ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಭಾ ನಾಯಕರ ವಿರುದ್ಧ ಸಿಡಿಮಿಡಿಗೊಂಡರು.
ಬೀದಿ ದೀಪ ಸರಿಪಡಿಸುವಂತೆ ಸಾಕಷ್ಟು ಬಾರಿ ಒತ್ತಾಯ ಮಾಡಿದರೂ ಸರಿಪಡಿಸುವ ಕಾರ್ಯ ನಡೆಯುತ್ತಿಲ್ಲ. ಒಂದು ತಂಡದಿಂದ ನಿರ್ವಹಣೆ ಅಸಾಧ್ಯ ಎಂದು 2 ತಂಡಗಳನ್ನು ರಚಿಸಿದರೂ, ದುರಸ್ಥಿ ಕಾರ್ಯ ಮಾತ್ರ ನಿಧಾನಗತಿಯಲ್ಲಿ ನಡೆಯುತ್ತಿದೆ. ಸಿಬ್ಬಂದಿಗಳ ಮೇಲೆ ಅಧಿಕಾರಿಗಳಿಗೆ ಹಿಡಿತವಿಲ್ಲ. ಸ್ಮಶಾನಗಳಲ್ಲಿ ದೀಪವಿಲ್ಲದೇ ರಾತ್ರಿ ಸಮಯದಲ್ಲಿ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಬೀದಿ ದೀಪ ಸರಿಪಡಿಸುವಂತೆ ಸದಸ್ಯರು ದೂರು ನೀಡಿದರೆ, ಸಿಬ್ಬಂದಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಸದಸ್ಯರಾದ ಎಂ.ಟಿ.ನಾಯ್ಕ, ಸಂತೋಷ ನಾಯ್ಕ, ಆಶಾ ನಾಯ್ಕ, ವಿನಯಾ ಜಾರ್ಜ್, ಲಕ್ಷ್ಮೀ ಚಂದಾವಕರ್ ಸೇರಿದಂತೆ ಮತ್ತಿತರ ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ಮುಖ್ಯಾಧಿಕಾರಿ ಅಜಯ ಭಂಡಾರರ್ಕರ್ ಪ್ರತಿಕ್ರಿಯಿಸಿ, ಪಟ್ಟಣ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಬೀದಿ ದೀಪ, ಹೈಮಾಸ್ಕ್ ದುರಸ್ಥಿ ಹಾಗೂ ನಿರ್ವಹಣೆಗೆ ಪುರಸಭಾ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸಭಾ ನಾಯಕರು ಹಾಗೂ ಸರ್ವ ಸದಸ್ಯರ ನಿರ್ಣಯದಂತೆ ಎರಡು ತಂಡಗಳನ್ನು ರಚನೆ ಮಾಡಿದ್ದೇವೆ. ಒಂದು ತಂಡ ದೂರು ಸರಿಪಡಿಸುತ್ತದೆ. ಮತ್ತೊಂದು ತಂಡ ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡಿ, ಬೀದಿ ದೀಪ ಸರಿಪಡಿಸುವ ಕಾರ್ಯ ನಡೆಸುತ್ತಿದೆ. 1 ರಿಂದ 9 ವಾರ್ಡ್‌ಗಳನ್ನು ಪೂರ್ಣಗೊಳಿಸಿದ್ದೇವೆ. ಉಳಿದ ವಾರ್ಡ್‌ಗಳಲ್ಲಿ ಗಣೇಶ ಚತುರ್ಥಿ ಒಳಗಡೆ ಸರಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ವಾರ್ಡ್‌ಗಳಲ್ಲಿ ಬೀದಿ ದೀಪದ ಸ್ವಿಚ್ ಆನ್ ಮತ್ತು ಆಫ್ ಮಾಡಲು ನೇಮಿಸಿದ ಸಿಬ್ಬಂದಿಗಳಿಗೆ ಯಾವ ವಿದ್ಯುತ್ ಕಂಬದಲ್ಲಿ ದೀಪ ಉರಿಯುತ್ತಿಲ್ಲ ಎಂಬ ಮಾಹಿತಿಯನ್ನು ಸಂಬಂಧಿಸಿದ ನೋಡಲ್ ಅಧಿಕಾರಿಗೆ ತಿಳಿಸಲು ಸಂಬಳ ಹೆಚ್ಚಳ ಮಾಡಿದ್ದೇವೆ. ಅವರು ಈ ಕಾರ್ಯ ಕೈಗೊಳ್ಳಲು ಮುಖ್ಯಾಧಿಕಾರಿ ಸೂಚಿಸಬೇಕು. ಅಲ್ಲದೇ ಖಡಕ್ ವಾರ್ನಿಂಗ್ ನೀಡಬೇಕು. ಕೆಲಸ ಸರಿಯಾಗಿ ನಿರ್ವಹಣೆ ಮಾಡದವರಿಗೆ ಸಂಬಳ ತಡೆ ಹಿಡಿಯಬೇಕು. ಇದರಿಂದ ಬೀದಿ ದೀಪ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಸರ್ವ ಸದಸ್ಯರು ನಿರ್ಣಯ ಕೈಗೊಂಡರು.
ಸದಸ್ಯ ಸಂತೋಷ ನಾಯ್ಕ ಮಾತನಾಡಿ, ಪುರಸಭೆಯ ಕಿತ್ತೂರ ರಾಣಿ ಚೆನ್ನಮ್ಮ ಉದ್ಯಾನವನದ ಖಾಲಿ ಜಾಗದಲ್ಲಿ ಹಸಿಕಸ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಗಬ್ಬೆದ್ದು ನಾರುತ್ತಿದ್ದು, ವಾಯುವಿಹಾರಕ್ಕೆ ಆಗಮಿಸುವವರಿಗೆ ಬಹಳ ತೊಂದರೆಯಾಗಿದೆ. ರೋಗ ಹರಡುವ ಲಕ್ಷಣ ಅಧಿಕವಾಗಿದೆ. ಪಟ್ಟಣದ ಕೇಂದ್ರ ಸ್ಥಳದಲ್ಲಿರುವ ಉದ್ಯಾನವನದ ಸ್ಥಿತಿ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ತ್ಯಾಜ್ಯಗಳಿಂದ ಗಬ್ಬೆದ್ದು ನಾರುತ್ತಿರುವುದು ನಿಜ. ಪಟ್ಟಣದ ಕಸ ವಿಲೇವಾರಿ ಮಾಡಲು ಸ್ಥಳದ ಕೊರತೆಯಿದೆ. ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಹಸಿ ಕಸದಿಂದ ತಯಾರಿಸಿದ ಸುಮಾರು 25 ಲೋಡ್‌ಗಳಷ್ಟು ಗೊಬ್ಬರವಿದೆ. ಅದನ್ನು ವಿಲೇವಾರಿ ಮಾಡಲು ಖಾಸಗಿಯವರು ಜಾಗ ನೀಡಿದ್ದಾರೆ. ಮಳೆಗಾಲವಾದ್ದರಿಂದ ಸಮಸ್ಯೆಯಾಗಿದೆ. ಮಳೆ ಕಡಿಮೆ ಇದ್ದ ಸಮಯದಲ್ಲಿ ಸಾಗಿಸಿ, ಉದ್ಯಾನವನದಲ್ಲಿ ಶುಚಿತ್ವ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.
ಸದಸ್ಯ ರಾಜೇಶ ಪೈ ಮಾತನಾಡಿ, ಮನೆ ಮನೆ ಕಸ ಸಂಗ್ರಹಿಸುವ ವಾಹನ ಸರಿಯಾಗಿ ಬರುತ್ತಿಲ್ಲ. ಪ್ರತಿ 2 ದಿನಕ್ಕೊಮ್ಮೆ ಬರಬೇಕಾದ ವಾಹನ ಮೂರು ದಿನವಾದರೂ ಬರುತ್ತಿಲ್ಲ. ಇದನ್ನು ಪ್ರತಿನಿತ್ಯ ಗಮನಿಸುತ್ತಿಲ್ಲವೇ ಎಂದು ಆರೋಗ್ಯ ನಿರೀಕ್ಷಕರನ್ನು ಪ್ರಶ್ನಿಸಿದರು. ಎಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಯಾವ ವಾರ್ಡ್‌ಗೆ ಯಾರು ತೆರಳುತ್ತಾರೆ ಎಂದು ಪ್ರತಿನಿತ್ಯ ಒಬ್ಬೊಬ್ಬ ಸಿಬ್ಬಂದಿಗಳು ಬೆಳಿಗ್ಗೆ 6.30 ಕ್ಕೆ ಕಚೇರಿಗೆ ಆಗಮಿಸಿ, ಪರಿಶೀಲಿಸಬೇಕು ಎಂದು ಸೂಚಿಸಿದರು. ಪ್ರತಿ ವಾರ್ಡ್‌ಗಳಲ್ಲಿ 50-60 ಬಲ್ಬ್ ಹಾಳಾಗಲು ಕಾರಣವೇನು? ಮುಖ್ಯಾಧಿಕಾರಿಗಳು ಸರಿಯಾಗಿ ಲೆಕ್ಕ ನಿರ್ವಹಿಸುತ್ತಿಲ್ಲ. ಇದರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುಮತಿ ಭಟ್, ಸದಸ್ಯರಾದ ತುಳುಸು ಗೌಡ, ಮಹೇಶ ನಾಯ್ಕ ವನ್ನಳ್ಳಿ, ಮೋಹಿನಿ ಗೌಡ, ಶೈಲಾ ಗೌಡ, ಲಕ್ಷ್ಮಿ ಮುಕ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



