
ದಾವಣಗೆರೆ: ಬಿಜೆಪಿ-ಜೆಡಿಎಸ್ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಇಬ್ಬರೂ ಒಂದಾದರೂ ನಮ್ಮನ್ನು ಏನೂ ಮಾಡಲಾರರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡ್ತಿಲ್ಲ, ಅವರ ಬಳಿ ಹಣ ಇಲ್ಲವೆಂದು ಪ್ರತಿಪಕ್ಷದವರು ವಿನಾಕಾರಣ ಟೀಕೆ ಮಾಡ್ತಾರೆ. ದಾವಣಗೆರೆಯಲ್ಲಿ 1,356 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿದ್ದು ಇವರ ಕಣ್ಣಿಗೆ ಕಾಣುವುದಿಲ್ವಾ? ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಜಾರಿ ಮಾಡಿದ್ರೆ ರಾಜ್ಯ ದಿವಾಳಿ ಅಂದಿದ್ರು ಮೋದಿ: ಪ್ರಧಾನಿ ಮೋದಿ ಅವರು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಅಲ್ಲದೇ ಜಾರಿ ಮಾಡಿದ್ರೆ ರಾಜ್ಯ ದಿವಾಳಿ ಆಗಲಿದೆ ಎಂದು ಹೇಳಿದ್ದರು. ಅಂದು 3 ಲಕ್ಷದ 71 ಸಾವಿರ ಕೋಟಿ ಬಜೆಟ್ ಇತ್ತು. ಇದೀಗ 4 ಲಕ್ಷದ 84 ಸಾವಿರ ಕೋಟಿ ಬಜೆಟ್ ಇದ್ದು, ರಾಜ್ಯ ದಿವಾಳಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜೂನ್ 11ಕ್ಕೆ ಶಕ್ತಿ ಯೋಜನೆ ಗ್ಯಾರಂಟಿ ಜಾರಿ ಮಾಡಿ ಎರಡು ವರ್ಷ ಆಯಿತು. 8 ಕೋಟಿ 90 ಲಕ್ಷ ಮಹಿಳೆಯರು ಉಚಿತವಾಗಿ ದಾವಣಗೆರೆಯಲ್ಲೇ ಪ್ರಯಾಣ ಮಾಡಿದ್ದಾರೆ. 2023 ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು. 5 ಕೆಜಿ ಅಕ್ಕಿ ಉಚಿತವಾಗಿ ಕೊಡಲು ತೀರ್ಮಾನ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಐದು ಕೆಜಿ ಸಾಲಲಿಲ್ಲವೆಂದು 10 ಕೆಜಿಗೆ ಏರಿಸಿದೆವು. ಗೃಹ ಜ್ಯೋತಿ ಯೋಜನೆ 1 ಕೋಟಿ 64 ಲಕ್ಷ ಕುಟುಂಬಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿ 2 ಸಾವಿರ ಕೊಡುವ ಯೋಜನೆ ಮಾಡಿದ್ದೇವೆ. ನಿರುದ್ಯೋಗಿ ಯುವಕರಿಗೆ 3 ಸಾವಿರ ಕೊಡುವ ಯೋಜನೆ ಜಾರಿ ಆಗಿದೆ. ಇವೆಲ್ಲವೂ ಅಭಿವೃದ್ಧಿ ಕೆಲಸ ಅಲ್ಲವೆ?. 55 ಸಾವಿರ ಕೋಟಿ ಖರ್ಚು ಆಗುತ್ತಿದ್ದು, ಇದು ಅಭಿವೃದ್ಧಿ ಅಲ್ವಾ?. ಪ್ರತಿ ಜಿಲ್ಲೆಯಲ್ಲಿ 2 ಸಾವಿರ ಕೋಟಿಗಟ್ಟಲೆ ಕೆಲಸ ಮಾಡಿದ್ದೇವೆ. ಇದು ಅಭಿವೃದ್ಧಿ ಅಲ್ವಾ?. ಬಿಜೆಪಿ ಅವಧಿಯಲ್ಲಿ ಒಂದು ಮನೆ ಕೊಡಲಿಲ್ಲ. ಬರೀ ಲೂಟಿ ಹೊಡೆದ್ರು. 1892 ಮನೆಗಳನ್ನು ಪೌರಕಾರ್ಮಿಕರಿಗೆ ಕೊಟ್ಟಿದ್ದೇವೆ. ಅವರಿಗೆ ನಾಚಿಕೆ ಆಗಲ್ವಾ?. ಅವರಿಗೆ ಮಾನ, ಮರ್ಯಾದೆ ಇದೆಯಾ? ಎಂದು ಸಿಎಂ ಪ್ರಶ್ನೆಗಳ ಸುರಿಮಳೆಗೈದರು.
56 ಇಂಚಿನ ಎದೆಯಲ್ಲಿ ಮನುಷ್ಯತ್ವ, ಕರುಣೆ ಇರಬೇಕು: ಮೋದಿ ಅವರು ಅಧಿಕಾರಕ್ಕೆ ಬಂದು 11 ವರ್ಷ ಆಯಿತು. 56 ಇಂಚಿನ ಎದೆ ಇದೆ ಎನ್ನುತ್ತಾರೆ. ಎದೆಯಲ್ಲಿ ಮನುಷ್ಯತ್ವ ಇರಬೇಕು, ಕರುಣೆ ಇರಬೇಕು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಇವರು ಬೆಲೆ ಏರಿಕೆ ವಿರುದ್ಧ ಏಕೆ ಮಾತನಾಡಲ್ಲ?. ಮೋದಿ ಪಿಎಂ ಆಗುವ ವೇಳೆ 28 ಸಾವಿರ ಚಿನ್ನದ ಬೆಲೆ ಇತ್ತು. ಇದೀಗ 1 ಲಕ್ಷ ಬೆಲೆ ಇದೆ. ಇದಕ್ಕೆ ನರೇಂದ್ರ ಮೋದಿಯೇ ಕಾರಣ. ಒಂದು ಕೆಜಿ ಬೆಳ್ಳಿಯ ಬೆಲೆ 43 ಸಾವಿರ ಇತ್ತು, ಇದೀಗ 95 ಸಾವಿರ ಆಗಿದೆ. ಅಲ್ಲದೆ ಪೆಟ್ರೋಲ್, ಡಿಸಿಲ್, ಗ್ಯಾಸ್ ಬೆಲೆ ಗಗನಕ್ಕೆ ಏರಿಕೆ ಆಗಿದೆ. 400 ರೂಪಾಯಿ ಇದ್ದ ಗ್ಯಾಸ್ 890 ರೂಪಾಯಿ ಆಗಿದೆ. ಗ್ಯಾಸ್ ಸಬ್ಸಿಡಿ ಕೊಡ್ತಿದ್ದರು ಅದನ್ನೂ ನಿಲ್ಲಿಸಿದ್ದಾರೆ. ಇದರಿಂದ ಜನ ಸೌದೆ ಒಲೆಯತ್ತ ವಾಪಸ್ ಆಗಿದ್ದಾರೆ. ದೆಹಲಿ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶದ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ರು ಎಂದು ಸಿಎಂ ಕಿಡಿಕಾರಿದರು.
ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳನ್ನು ಬಿಜೆಪಿ-ಜೆಡಿಎಸ್ ಪಕ್ಷದವರೂ ಪಡೆಯುತ್ತಿದ್ದಾರೆ. ಆದರೆ, ಟೀಕೆ ಮಾತ್ರ ಕಾಂಗ್ರೆಸ್ ಪಕ್ಷದವರ ಮೇಲೆ ಮಾಡ್ತಾರೆ ಎಂದರು.


