ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಅಬ್ಬರ ತೀವ್ರವಾಗಿದೆ. ರಾಜ್ಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಅಲ್ಲಲ್ಲಿ ಪ್ರವಾಹ/ಭೂ ಕುಸಿತ ಪ್ರಮಾಣ ಹೆಚ್ಚುತ್ತಿರುವುದು ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪ್ರವಾಹ ಹಾಗೂ ಭೂ ಕುಸಿತ ಹಾಗೂ ಇತರೆ ವಿಪತ್ತುಗಳಿಗೆ ತುತ್ತಾಗಬಹುದಾದ ಪ್ರದೇಶಗಳನ್ನು ಗುರುತಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಮುಂಗಾರು ಮಳೆಯ ಅಬ್ಬರಕ್ಕೆ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದ್ದರೆ, ಇತ್ತ ಭೂ ಕುಸಿತ ಪ್ರಮಾಣವೂ ಹೆಚ್ಚುತ್ತಲೇ ಇದೆ. ಮಳೆಯ ಅಬ್ಬರಕ್ಕೆ ಭೂ ಕುಸಿತದಿಂದ ಸಾವಿನ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಈ ಸಂಬಂಧ ಕಂದಾಯ ಇಲಾಖೆ ಮುಂಗಾರು ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಪ್ರವಾಹ/ಭೂ ಕುಸಿತಕ್ಕೆ ತುತ್ತಾಗಬಹುದಾದ ಪ್ರದೇಶಗಳನ್ನು ಗುರುತಿಸಿದೆ. ಆ ಮೂಲಕ ಮುಂಗಾರು ಮಳೆ ಅನಾಹುತಗಳಿಗೆ ತುತ್ತಾಗಬಹುದಾದ ಜಿಲ್ಲಾವಾರು ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ.

31,261 ಚ.ಕಿ.ಮೀ. ಪ್ರದೇಶ ಭೂ ಕುಸಿತ ಪೀಡಿತ: ರಾಜ್ಯದಲ್ಲಿ ಸುಮಾರು 31,261 ಚದರ ಕಿ.ಮೀ ಪ್ರದೇಶ ಭೂ ಕುಸಿತಕ್ಕೆ ತುತ್ತಾಗಬಹುದಾದ ಪ್ರದೇಶವೆಂದು ಗುರುತಿಸಲಾಗಿದೆ. ಸುಮಾರು 29 ತಾಲೂಕುಗಳು ಭೂ ಕುಸಿತಕ್ಕೆ ತುತ್ತುತಾಗುವ ಅಪಾಯ ಹೆಚ್ಚಿದೆ. ಈ ಪೈಕಿ 1,164.52 ಚ.ಕಿಮೀ. ಪ್ರದೇಶ ಅತಿ ಹೆಚ್ಚು ಭೂ ಕುಸಿತ ಅಪಾಯ ಹೊಂದಿದ್ದರೆ, 5,386.79 ಚ.ಕಿ.ಮೀ. ಮಧ್ಯಮ ಅಪಾಯ ಹೊಂದಿದೆ. ಇನ್ನು 24,710.11 ಚ.ಕಿ.ಮೀ. ಕಡಿಮೆ ಭೂ ಕುಸಿತದ ಅಪಾಯ ಹೊಂದಿದೆ. ಪ್ರಮುಖವಾಗಿ ದ.ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಭೂ ಕುಸಿತ ಉಂಟಾಗುತ್ತಿದೆ. ಭಾರತೀಯ ಭೂ ವಿಜ್ಞಾನ ಸಮೀಕ್ಷೆ ಹಾಗೂ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಸಮಿತಿಯ ವರದಿ ಪ್ರಕಾರ ಕರ್ನಾಟಕದಲ್ಲಿ ಕನಿಷ್ಠ 15.30% ಭೂ ಪ್ರದೇಶ ಭೂ ಕುಸಿತದ ಅಪಾಯ ಹೊಂದಿದೆ. ಕಂದಾಯ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ ರಾಜ್ಯದಲ್ಲಿ 2006ರಿಂದ ಈವರೆಗೆ ಸುಮಾರು 1,541 ಭೂ ಕುಸಿತಗಳು ಸಂಭವಿಸಿದ್ದು, 101 ಸಾವುಗಳು ವರದಿಯಾಗಿವೆ.

ಕಂದಾಯ ಇಲಾಖೆಯ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ವರದಿ ಪ್ರಕಾರ, ಉತ್ತರ ಕನ್ನಡದಲ್ಲಿ ಅತಿ ಹೆಚ್ಚು 8,389.26 ಚ.ಕಿ.ಮೀ. ಪ್ರದೇಶ ಭೂ ಕುಸಿತದ ಅಪಾಯ ಹೊಂದಿದೆ. ಶಿವಮೊಗ್ಗದಲ್ಲಿ 4,797.97 ಚ.ಕಿ.ಮೀ. ಪ್ರದೇಶ ಭೂ ಕುಸಿತಕ್ಕೆ ತುತ್ತಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4,600 ಚ.ಕಿ.ಮೀ. ಪ್ರದೇಶ ಭೂ ಕುಸಿತಕ್ಕೆ ತುತ್ತಾಗುತ್ತಿರುತ್ತದೆ. ಕೊಡಗಿನಲ್ಲಿ ಸುಮಾರು 4,150 ಚ.ಕಿ.ಮೀ. ಪ್ರದೇಶ ಭೂ ಕುಸಿತದ ಅಪಾಯ ಹೊಂದಿದೆ. ಚಿಕ್ಕಮಗಳೂರಲ್ಲಿ ಸುಮಾರು 4,100 ಚ.ಕಿ.ಮೀ. ಪ್ರದೇಶಗಳು ಭೂ ಕುಸಿತದ ಅಪಾಯ ಹೊಂದಿದೆ. ಇನ್ನು ಉಡುಪಿಯಲ್ಲಿ ಸುಮಾರು 2,650 ಚ.ಕಿ.ಮೀ ಪ್ರದೇಶ ಭೂ ಕುಸಿತಕ್ಕೆ ತುತ್ತಾಗುತ್ತಿದೆ. ಹಾಸನದಲ್ಲಿ 1,100 ಚ.ಕಿ.ಮೀ. ಪ್ರದೇಶದಲ್ಲಿ ಭೂ ಕುಸಿತ ಅಪಾಯ ಇದೆ.

ಕಂದಾಯ ಇಲಾಖೆಯ ಮಾಹಿತಿಯಂತೆ ಕಳೆದ 10-15 ವರ್ಷಗಳಿಂದ ಉತ್ತರ ಕನ್ನಡದ 8 ತಾಲೂಕುಗಳಲ್ಲಿ 440 ಕಡೆ ಭೂ ಕುಸಿತ ಸಂಭವಿಸುತ್ತಿದೆ. ಅದೇ ರೀತಿ ಶಿವಮೊಗ್ಗದ ಮೂರು ತಾಲೂಕುಗಳಲ್ಲಿ 360 ಕಡೆ ಭೂ ಕುಸಿತ ಉಂಟಾಗುತ್ತಿದೆ. ದಕ್ಷಿಣ ಕನ್ನಡದ 6 ತಾಲೂಕುಗಳಲ್ಲಿ 96 ಕಡೆ ಭೂ ಕುಸಿತಗಳು ಉಂಟಾಗುತ್ತಿದೆ. ಚಿಕ್ಕಮಗಳೂರಿನ 4 ತಾಲೂಕುಗಳಲ್ಲಿ 200 ಕಡೆ ಭೂ ಕುಸಿತ ಸಂಭವಿಸುತ್ತಿರುತ್ತಿದೆ. ಕೊಡಗಿನ 3 ತಾಲೂಕುಗಳಲ್ಲಿ 104 ಕಡೆ ಭೂ ಕುಸಿತ ಸಂಭವಿಸುತ್ತಿದೆ. ಅದೇ ರೀತಿ ಉಡುಪಿಯ 4 ತಾಲೂಕುಗಳಲ್ಲಿ 102 ಕಡೆ ಭೂ ಕುಸಿತ ಸಂಭವಿಸುತ್ತಿದೆ. ಹಾಸನದ ಸಕಲೇಶಪುರ ತಾಲೂಕಿನಲ್ಲಿ 20ಕ್ಕೂ ಅಧಿಕ ಕಡೆ ಪದೇ ಪದೆ ಭೂ ಕುಸಿತ ಸಂಭವಿಸುತ್ತಿದೆ.
2,252 ಪ್ರವಾಹ/ಭೂ ಕುಸಿತ ಪೀಡಿತ ಗ್ರಾಮಗಳ ಗುರುತು: ಈ ಬಾರಿ ಮುಂಗಾರು ವೇಳೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ರಾಜ್ಯಾದ್ಯಂತ ಸುಮಾರು 2,252 ಗ್ರಾಮಗಳನ್ನು ಪ್ರವಾಹ/ಭೂ ಕುಸಿತಕ್ಕೆ ತುತ್ತಾಗಬಹುದೆಂದು ಗುರುತಿಸಿದೆ. ಆ ಮೂಲಕ ಸುಮಾರು 19,32,185 ಜನಸಂಖ್ಯೆ ಪ್ರವಾಹ/ಭೂ ಕುಸಿತಕ್ಕೆ ತುತ್ತಾಗಬಹುದು ಎಂದು ಅಂದಾಜಿಸಿದೆ. ಒಟ್ಟು 171 ತಾಲೂಕುಗಳನ್ನು ಪ್ರವಾಹ/ಭೂ ಕುಸಿತಕ್ಕೆ ತುತ್ತಾಗಬಹುದು ಎಂದು ಗುರುತಿಸಿದೆ. ಒಟ್ಟು 1,288 ಗ್ರಾಮ ಪಂಚಾಯಿತಿಗಳು ಪ್ರವಾಹ/ಭೂ ಕುಸಿತಕ್ಕೆ ತುತ್ತಾಗಬಹುದೆಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 201 ಸ್ಥಳಗಳಲ್ಲಿ ಪ್ರವಾಹ ಪೀಡಿತವೆಂದು ಗುರಿತಿಸಲಾಗಿದೆ.
ಬೆಳಗಾವಿಯಲ್ಲಿ 230 ಗ್ರಾಮಗಳನ್ನು ಪ್ರವಾಹ/ಭೂ ಕುಸಿತ ತುತ್ತಾಗಬಹುದಾದ ಪ್ರದೇಶ ಎಂದು ಗುರುತಿಸಲಾಗಿದೆ. ಬಾಗಲಕೋಟೆಯಲ್ಲಿ 203 ಗ್ರಾಮಗಳನ್ನು ಪ್ರವಾಹ/ಭೂ ಕುಸಿತ ತುತ್ತಾಗಬಹುದಾದ ಪ್ರದೇಶ ಎಂದು ಗುರುತಿಸಲಾಗಿದೆ. ವಿಜಯಪುರದಲ್ಲಿ 76 ಗ್ರಾಮಗಳನ್ನು ಪ್ರವಾಹ/ಭೂ ಕುಸಿತ ತುತ್ತಾಗಬಹುದಾದ ಪ್ರದೇಶ ಎಂದು ಗುರುತಿಸಲಾಗಿದೆ. ಉತ್ತರ ಕನ್ನಡದಲ್ಲಿ 208 ಗ್ರಾಮಗಳು, ಚಿತ್ರದುರ್ಗದಲ್ಲಿ 51 ಗ್ರಾಮಗಳು, ಬೀದರ್ನಲ್ಲಿ 51 ಗ್ರಾಮಗಳು, ಶಿವಮೊಗ್ಗದಲ್ಲಿ 216, ಕಲಬುರಗಿಯಲ್ಲಿ 153, ಗದಗದಲ್ಲಿ 43, ಬಳ್ಳಾರಿಯಲ್ಲಿ 19, ಕೊಪ್ಪಳ 27, ಹಾವೇರಿಯಲ್ಲಿ 80, ದ.ಕನ್ನಡದಲ್ಲಿ 90, ಉಡುಪಿಯಲ್ಲಿ 86 ಗ್ರಾಮಗಳನ್ನು ಪ್ರವಾಹ/ಭೂ ಕುಸಿತ ತುತ್ತಾಗಬಹುದಾದ ಪ್ರದೇಶ ಎಂದು ಗುರುತಿಸಲಾಗಿದೆ.
ಇನ್ನು ಮಂಡ್ಯದಲ್ಲಿ 112 ಗ್ರಾಮಗಳು, ಚಾಮರಾಜನಗರದಲ್ಲಿ 21 ಗ್ರಾಮಗಳು, ಚಿಕ್ಕಮಗಳೂರಲ್ಲಿ 85 ಗ್ರಾಮಗಳು, ಕೊಡಗಿನಲ್ಲಿ 88 ಗ್ರಾಮಗಳು, ಯಾದಗಿರಿಯಲ್ಲಿ 80 ಗ್ರಾಮಗಳು, ಹಾಸನದಲ್ಲಿ 81 ಗ್ರಾಮಗಳು, ಧಾರವಾಡದಲ್ಲಿ 56 ಗ್ರಾಮಗಳು, ತುಮಕೂರಿನಲ್ಲಿ 13 ಗ್ರಾಮಗಳು, ರಾಯಚೂರಿನಲ್ಲಿ 26 ಗ್ರಾಮಗಳು, ವಿಜಯನಗರದಲ್ಲಿ 22 ಗ್ರಾಮಗಳು, ಮೈಸೂರಲ್ಲಿ 63 ಗ್ರಾಮಗಳು, ರಾಮನಗರದಲ್ಲಿ 17 ಗ್ರಾಮಗಳು ಮತ್ತು ದಾವಣಗೆರೆಯಲ್ಲಿ 55 ಗ್ರಾಮಗಳನ್ನು ಪ್ರವಾಹ/ಭೂ ಕುಸಿತ ತುತ್ತಾಗಬಹುದಾದ ಪ್ರದೇಶ ಎಂದು ಗುರುತಿಸಲಾಗಿದೆ.

ವಿಪತ್ತು ನಿರ್ವಹಣಾ ಕಾರ್ಯಪಡೆ ರಚನೆ: ಪ್ರವಾಹ ಮತ್ತು ಭೂ ಕುಸಿತ ಪೀಡಿತ ಪ್ರದೇಶಗಳಲ್ಲಿ ವಾರ್ಡಿನ ಕಂದಾಯಾಧಿಕಾರಿ/ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿ, ಪೊಲೀಸ್ ಪ್ರತಿನಿಧಿ, ಅಗ್ನಿಶಾಮಕ ಇಲಾಖೆಯ ಪ್ರತಿನಿಧಿ, ಆರೋಗ್ಯ ಇಲಾಖೆಯ ಪ್ರತಿನಿಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿ ಹಾಗೂ ವಶು ಸಂಗೋಪನೆ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ ನಗರ ಸ್ಥಳೀಯ ಸಂಸ್ಥೆ/ಗ್ರಾಮೀಣ ಸ್ಥಳೀಯ ಸಂಸ್ಥೆ ವಿಪತ್ತು ನಿರ್ವಹಣಾ ಟಾಸ್ಕ್ ಫೋರ್ಸ್ ರಚಿಸಲು ಸೂಚಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆ/ಗ್ರಾಮೀಣ ಸ್ಥಳೀಯ ಸಂಸ್ಥೆ ವಿಪತ್ತು ನಿರ್ವಹಣಾ ಟಾಸ್ಕ್ ಫೋರ್ಸ್ ಸ್ಥಳೀಯ ಜ್ಞಾನ ಹಾಗೂ KSNDMC ಸಹಯೋಗದೊಂದಿಗೆ ಅವರ ವ್ಯಾಪ್ತಿಯಲ್ಲಿ ಎದುರಾಗಬಹುದಾದ ವಿವಿಧ ರೀತಿಯ ವಿಪತ್ತುಗಳನ್ನು ಗುರುತಿಸುವುದು. ಶೋಧನೆ, ಸ್ಥಳಾಂತರ, ರಕ್ಷಣಾ ಮತ್ತು ಪ್ರತಿಕ್ರಿಯೆ ತಂಡ ರಚಿಸುವುದು ಹಾಗೂ ತಂಡವು ಹೊಂದಿರುವ ರಕ್ಷಣಾ ಪರಿಕರಗಳ ಕಾರ್ಯಶೀಲತೆ ಮತ್ತು ಸನ್ನದ್ಧತೆಯನ್ನು ದೃಢಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.

ನೋಡಲ್ ಅಧಿಕಾರಿಗಳು ಮುಂಗಾರು ಅವಧಿಯಲ್ಲಿ ಪ್ರತಿ 10 ದಿನಗಳಿಗೊಮ್ಮೆ ಪ್ರವಾಹ / ಭೂಕುಸಿತ ಪೀಡಿತ ಗ್ರಾಮಗಳಿಗೆ ಭೇಟಿ ನೀಡುವುದು ಹಾಗೂ ಸಭೆ ನಡೆಸುವುದು ಮತ್ತು ಭಾರೀ ಮಳೆ(ರೆಡ್ ಅಲರ್ಟ್)/ಪ್ರವಾಹ ಉಂಟಾಗುವ ಸಾಧ್ಯತೆ ಇದ್ದಾಗ ಸ್ಥಳೀಯವಾಗಿ ವಾಸ್ತವ್ಯ ಹೂಡಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಬೇಕು. ಟಾಸ್ಕ್ ಫೋರ್ಸ್ ಸಮಿತಿಯು ಪ್ರವಾಹ / ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಪ್ರವಾಹ/ಭೂ ಕುಸಿತ ಆಗುವ ಸಂಭವವಿದ್ದಲ್ಲಿ ಪೂರ್ವಬಾವಿಯಾಗಿ ಜನ-ಜಾನುವಾರುಗಳನ್ನು ಸ್ಥಳಾಂತರಗೊಳಿಸುವಂತೆ ಸೂಚಿಸಲಾಗಿದೆ.
