ಉದ್ಘಾಟನೆಗೊಂಡ ನೂತನ ಅಂಗನವಾಡಿ ಕಟ್ಟಡ: ಸರ್ಕಾರದ ಶಿಷ್ಠಾಚಾರ ಪಾಲಿಸದ ಆರೋಪ

ದಾಂಡೇಲಿ: ನಗರದ ವಾರ್ಡ್ ನಂ 13 ರಲ್ಲಿ 19 ಲಕ್ಷ ರೂ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಇಂದು ಉದ್ಘಾಟನೆಗೊಂಡಿದೆ. ಆದರೆ ವೇಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿ.ಎಸ್.ಆರ್ ನಿಧಿ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದ ಉದ್ಘಾಟನೆ ವೇಳೆ ಸರ್ಕಾರದ ಯಾವುದೇ ಶಿಷ್ಠಾಚಾರ ಪಾಲಿಸದೇ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇದು ಸರ್ಕಾರಿ ಸೌಮ್ಯದ ಅಂಗನವಾಡಿ ಕಟ್ಟಡವಾಗಿದೆ. ಆದರೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಧಿಕಾರಿಗಳು ಈ ಅಂಗನವಾಡಿಗೆ ಸರ್ಕಾರಿ ನಾಮಫಲಕವನ್ನು ಅಳವಡಿಸಿಲ್ಲ. ಕೇವಲ ‘ವೆಸ್ಕೋ ಅಂಗನವಾಡಿ’ ಎಂದು ಹೆಸರಿಸಿ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕ ಆರ್.ವಿ ದೇಶಪಾಂಡೆ ಅವರಿಂದ ಉದ್ಘಾಟಿಸಿದೆ.

ಈ ಅಂಗನವಾಡಿ ಕೇಂದ್ರವು ನಗರಸಭೆಗೆ ಸೇರಿದ ಜಾಗದಲ್ಲಿದೆ. ಶಿಕ್ಷಕಿ ಮತ್ತು ಸಹಾಯಕಿಯ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸರ್ಕಾರವೇ ಭರಿಸುತ್ತದೆ. ಆದರೆ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ತಹಶಿಲ್ದಾರ್, ನಗರಸಭೆ ಪೌರಾಯುಕ್ತರು, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಹೀಗೆ ಎಲ್ಲರ ಹೆಸರನ್ನು ಕಡೆಗಣಿಸಿ ಕೇವಲ ಆ ವಾರ್ಡಿನ ಸದಸ್ಯರ ಹೆಸರು ಹಾಕಿದ್ದಾರೆ.

ಜೊತೆಗೆ ರಾಜ್ಯ ಸರ್ಕಾರದ ಹೆಸರನ್ನೂ ಹಾಕಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಜಯಕರ್ನಾಟಕ ಸಂಘಟನೆ ಪ್ರಶ್ನಿಸಿದೆ. ಅಲ್ಲದೇ ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕಾನೂನು ಹೋರಾಟ ನಡೆಸಲು ಸಂಘಟನೆ ತೀರ್ಮಾನಿಸಿದೆ ಎಂದು ತಿಳಿಸಿದೆ.