ಹುಬ್ಬಳ್ಳಿ: ರೈಲ್ವೆ ಇಲಾಖೆ ನಾಗರಿಕ ಸುರಕ್ಷಾ ಪಡೆಯ ಸ್ವಯಂ ಸೇವಕರೊಬ್ಬರ ಸಮಯಪ್ರಜ್ಞೆಯಿಂದ ದೊಡ್ಡ ದುರಂತವಾಗುವುದು ತಪ್ಪಿದೆ.
ನಗರದ ದಾಜಿಬಾನಪೇಟೆ ಸರ್ಕಲ್ ನಲ್ಲಿ ಮಂಗಳವಾರ ಗಣಪತಿ ಮೆಹರವಾಡೆ ಮನೆಯ 2 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಅಲ್ಲಿಯೇ ಇದ್ದ ದಾಮೋದರ ನಾಯ್ಕ ಬೆಂಕಿ ಗಮನಿಸಿ, ಕೂಡಲೇ ಮನೆಗೆ ಹೋಗಿ ನೋಡಿದಾಗ ಸಿಲಿಂಡರ್ ಸೊರಿಕೆಯಾಗಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಮನೆಯಲ್ಲಿ ಅಜ್ಜಿಯೊಬ್ಬರೇ ಇದ್ದರು. ನಂತರ ಮನೆಯಲ್ಲಿದ್ದ ಚಾದರವನ್ನು ಒದ್ದೆ ಮಾಡಿ ಉರಿಯುತ್ತಿದ್ದ ಸಿಲಿಂಡರ್ ಮೇಲೆ ಹಾಕಿ ಬೆಂಕಿ ನಂದಿಸಿದ್ದಾರೆ.
ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಆದರೆ ಸ್ಥಳಕ್ಕೆ ಬರಲು ವಿಳಂಬವಾಗಿತ್ತು. ಅಷ್ಟರಲ್ಲೇ ದಾಮೋದರ ಬೆಂಕಿಯನ್ನು ನಂದಿಸಿದ್ದರು. ಬೆಂಕಿಯಿಂದ ರೆಗ್ಯುಲೇಟರ್ ಸುಟ್ಟು ಹೋಗಿತ್ತು. ಹಾಗಾಗಿ ಗ್ಯಾಸ್ ಸೋರಿಕೆ ಯಾಗುತ್ತಲೇ ಇತ್ತು. ನಂತರ ಸಿಲಿಂಡರ್ ಅನ್ನು ಕೆಳಗಡೆ ತಂದು ಗ್ಯಾಸ್ ಲೀಕ್ ಆಗುವುದನ್ನು ಅಗ್ನಿಶಾಮಕ ಸಿಬ್ಬಂದಿ ಬಂದ್ ಮಾಡಿದರು. ಈ ಘಟನೆಯ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಅಜ್ಜಿಗೆ ಸ್ಥಳೀಯರು ಉಪಚಾರ ಮಾಡಿದರು. ಮನೆಯವರು ಕೆಲಸಕ್ಕೆ ಹೋದಾಗ ಅಜ್ಜಿ ಅಡುಗೆ ಮಾಡಲು ಗ್ಯಾಸ್ ಹಚ್ಚಲು ಹೋದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ದಾಮೋದರ ನಾಯ್ಕ ನ ಈ ಕಾರ್ಯಕ್ಕೆ ಸ್ಥಳೀಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಗ್ನಿಶಾಮಕ ದಳದ ಅಧಿಕಾರಿಗಳು ಇವರ ಸಾಹಸಕ್ಕೆ ಮೆಚ್ಚಿ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಜೊತೆಗೆ ನೈಋತ್ಯ ರೈಲ್ವೆ ಪ್ರಶಸ್ತಿ ನೀಡಿ ಗೌರವಿಸಿದೆ.