ತುಮಕೂರು: ಧಾರ್ಮಿಕ ಆಚರಣೆಗಳಿಗೆ ರಾಜ್ಯದ ಯಾವುದೇ ಶಾಲೆಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ. ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹಿಂದಿನಿಂದಲೂ ಗಣೇಶ ಹಬ್ಬವನ್ನು ಶಾಲೆಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ಸಂಪ್ರದಾಯವನ್ನು ಈಗ ಮುಂದುವರಿಸಲಾಗಿದೆಯೇ ಹೊರತು ಯಾವುದೇ ಹೊಸ ಆಚರಣೆಗೂ ಅವಕಾಶವಿಲ್ಲ ಎಂದಿದ್ದಾರೆ.
ಭಾರತೀಯರನ್ನು ಒಗ್ಗೂಡಿಸುವ ಸಲುವಾಗಿ ಗಣೇಶ ಹಬ್ಬ ಆಚರಣೆಗೆ ಬಂತು. ಬಾಲಗಂಗಾಧರ ತಿಲಕರು ಇದನ್ನು ಆರಂಭಿಸಿದರು. ಹಿಂದಿನಿಂದಲೂ ಬಂದಿರುವ ಪದ್ದತಿಯನ್ನು ನಾವು ನಿಲ್ಲಿಸಲು ಸಾಧ್ಯವಿಲ್ಲ. ಹೊಸ ಬೇಡಿಕೆ ಇಡುವ ಧಾರ್ಮಿಕ ಆಚರಣೆಗೆ ಅನುಮತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆಗೆ ಅವಕಾಶ ನೀಡಬೇಕೆಂಬ ಮುಸ್ಲಿಂ ಮುಖಂಡರ ಆಗ್ರಹವನ್ನು ತಳ್ಳಿ ಹಾಕಿದ್ದಾರೆ.