ಕರ್ನಾಟಕದಲ್ಲಿ ಮುಂಗಾರು ಚುರುಕು-ಹೊನ್ನಾವರ ತಾಲೂಕಿನಲ್ಲಿ ಗುಡುಗು ಸಹಿತ ಗಾಳಿ ಮಳೆ

ಕರ್ನಾಟಕದಾದ್ಯಂತ ಇಂದಿನಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಇತ್ತ ಕರಾವಳಿ ಜಿಲ್ಲೆಯಲ್ಲಿಯೂ ಮಳೆಯ ಅಬ್ಬರ ಜೋರಾಗಿದೆ. ಹೊನ್ನಾವರ ತಾಲೂಕಿನಲ್ಲಿ ಗುಡುಗು ಸಹಿತ ಭಾರಿ ಮಳೆ ಆರಂಭವಾಗಿದೆ..
ಕಳೇದ ಒಂದು ವಾರದಿಂದ ಒಣಹವೆ ಬಿಸಿಲಿನಿಂದ ಬಸವಳಿದಿದ್ದ ಜನರಿಗ ಮಳೆರಾಯ ತಂಪೆರೆದಿದ್ದಾನೆ. ಈ ಬಾರಿ ಬಹಳ ಬೇಗನೇ ಮುಂಗಾರು ಮಾರುತಗಳು ಎಂಟ್ರಿ ಕೊಟ್ಟಿದ್ದು, ಪ್ರತಿ ವರ್ಷ ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಮಾನ್ಸೂನ್ ಎಂಟ್ರಿ ಆಗುತ್ತದೆ. ಆದರೆ ಈ ಬಾರಿ ಕಳೆದ 16 ವರ್ಷಗಳಲ್ಲೇ ಮುಂಚಿತವಾಗಿ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿತ್ತು. ವಾಡಿಕೆಗಿಂತ ಮೊದಲೇ ಮಳೆ ಆರಂಭವಾಗಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿತ್ತು..


ಜೂ.12 ರ ನಂತರ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರಂಭವಾಗಿದೆ. ಇತ್ತ ಕರಾವಳಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹೊನ್ನಾವರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲು ಹಾಗೂ ಒಣಹವೆ ವಾತಾವರಣದಿಂದ ಕಂಗೆಟ್ಟಿದ್ದ ಜನರಿಗೆ ಮುಂಗಾರು ತಂಪೆರೆದಿದೆ.
ಇನ್ನು ನಿನ್ನೆ ರಾತ್ರಿಯಿಂದಲೇ ಆರಂಭವಾದ ಮಳೆ ಬೆಳಗಿನವರೆಗೂ ಎಡಬಿಡದೇ ಸುರಿದಿದೆ. ಬೆಳಗ್ಗೆ ಸ್ವಲ್ಪ ವಿರಾಮ ಕೊಟ್ಟಿದ್ದು, ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತವಾರಣ ಅಬ್ಬರ ಮಳೆ ಸುರಿಯಲಾರಂಭಿಸಿತು. ಇಂದಿನಿಂದ ಮುಂಗಾರು ಚುರುಕುಗೊಳ್ಳಲಿದ್ದು, ತಾಲೂಕಿನಲ್ಲಿ ಗುಡುಗು ಸಹಿತ ವರುಣನ ಅಬ್ಬರ ಜೋರಾಗಿದೆ.
ಇನ್ನೂ ಏಕಾಏಕಿ ಆರಂಭಗೊಂಡ ಮಳೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯ ಕೆಲಸಕ್ಕೆ ತೆರಳುವವರು ವಾಪಸ್ ಮನೆಗೆ ತೆರಳಲು ಪರದಾಡುವಂತಾಯ್ತು. ಒಂದೆಡೆ ಗುಡುಗು ಸಿಡಿಲಿನ ಆರ್ಭಟ ಮತ್ತೊಂದೆಡೆ ಗಾಳಿ ಮಳೆಗೆ ಜನರು, ವಾಹನ ಸವಾರರು ರಸ್ತೆ ಕಾಣದೇ ಪರದಾಡುವಂತಾಯ್ತು..
ಒಟ್ಟಿನಲ್ಲಿ ಇಂದಿನಿಂದ ಕರ್ನಾಟಕದಲ್ಲಿ ಮುಂಗಾರು ಬಿರುಸುಗೊಂಡಿದ್ದು, ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದೆ..