
ಬೆಂಗಳೂರು: ಆರ್ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ತನಿಖೆ ಕೈಗೊಂಡಿರುವ ಮ್ಯಾಜಿಸ್ಟೇಟ್ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಇಂದು 14 ಮಂದಿ ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಕಾಲ್ತುಳಿತದಲ್ಲಿ 11 ಮಂದಿ ಸಾವು ಹಾಗೂ 50ಕ್ಕಿಂತ ಹೆಚ್ಚು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ 15 ದಿನದೊಳಗಾಗಿ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ತನಿಖೆ ಚುರುಕುಗೊಳಿಸಿರುವ ತನಿಖಾಧಿಕಾರಿ ಜಗದೀಶ್ ಬುಧವಾರ ಕೆ.ಜಿ.ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಗಾಯಾಳುಗಳನ್ನು ಕರೆಯಿಸಿಕೊಂಡು ಹೇಳಿಕೆ ದಾಖಲಿಸಿಕೊಂಡರು.
ಹೇಳಿಕೆ ನೀಡಿದ ಬಳಿಕ ಗಾಯಾಳು ಮೋನಿಷ್ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳು ನೀಡಿದ ನೋಟಿಸ್ ಮೇರೆಗೆ ಇಂದು ಹಾಜರಾಗಿ ಹೇಳಿಕೆ ದಾಖಲಿಸಿದ್ದೇನೆ. ಘಟನೆ ಬಗ್ಗೆ ಪ್ರಾಥಮಿಕ ಮಾಹಿತಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಸಮಂಜಸವಾಗಿ ಉತ್ತರಿಸಿದ್ದೇನೆ ಎಂದರು.
ದುರ್ಘಟನೆಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಹಾಗೂ ರಾಜ್ಯ ಸರ್ಕಾರದ್ದು ಕೂಡ ತಪ್ಪಿದೆ. ಏಕಕಾಲದಲ್ಲಿ ಎರಡೂ ಕಡೆ ಕಾರ್ಯಕ್ರಮ ಆಯೋಜಿಸಬಾರದಾಗಿತ್ತು. ಎರಡು ದಿನ ಬಿಟ್ಟು ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು. ವಿಧಾನಸೌಧದ ಬಳಿ ಹೆಚ್ಚಿನ ಪೊಲೀಸರಿದ್ದರೆ, ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು. ಇನ್ಮುಂದೆ ಸ್ಟೇಡಿಯಂಗೆ ಹೋಗಿ ಪಂದ್ಯ ವೀಕ್ಷಿಸಲು ಭಯವಾಗುತ್ತದೆ. ಮುಂಚಿತವಾಗಿ ಟಿಕೆಟ್ ನೀಡಿದ್ದರೆ ಅನಾಹುತ ಆಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಟೇಡಿಯಂಗೆ ನೂತನ ಪೊಲೀಸ್ ಕಮೀಷನರ್ ಭೇಟಿ: ಕಾಲ್ತುಳಿತ ಸಂಬಂಧ ನೂತನ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿದರು. ದುರಂತ ಸಂಭವಿಸಿದ ಸ್ಟೇಡಿಯಂ ಗೇಟ್ಗಳ ಬಳಿ ತೆರಳಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮೊನ್ನೆಯಷ್ಟೇ ಸಿಐಡಿ ಅಧಿಕಾರಿಗಳು ಸ್ಥಳಕ್ಕೆ ಬಂದು ಮಹಜರು ಮಾಡಿದ್ದರು.
