ಹೇ ಸಿರಾಜ್.. ನಿಂಗೆ ಬುದ್ದಿ ಇಲ್ವಾ : ಐಸಿಸಿ ಅಂಗಳ ತಲುಪಿದ ಸಿರಾಜ್‌ vs ಹೆಡ್‌ ವಾಗ್ವಾದ

ಅಡಿಲೇಡ್‌: ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ವೇಳೆ ಆಸ್ಟ್ರೇಲಿಯಾ ಸ್ಟಾರ್‌ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಹಾಗೂ ಟೀಂ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ನಡುವಿನ ವಾಗ್ದಾದ ಐಸಿಸಿ ಅಂಗಳ ತಲುಪಿದೆ. ಇದರಿಂದ ಇಬ್ಬರ ವಿರುದ್ಧವೂ ಐಸಿಸಿ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಈ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಟ್ರಾವಿಸ್ ಹೆಡ್ ಅವರನ್ನು ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದ್ದರು. ಅತ್ತ ಔಟ್ ಆಗುತ್ತಿದ್ದಂತೆ ಹೆಡ್ ವೆಲ್ ಬೌಲ್ಡ್​ ಎಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಸಿರಾಜ್ ತೊಲಗುವಂತೆ ಕೈ ಸನ್ನೆ ಮಾಡಿದ್ದರು.

ಮೊಹಮ್ಮದ್ ಸಿರಾಜ್ ಅವರ ಈ ನಡೆಯನ್ನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಪ್ರಶ್ನಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾತನಾಡಿದ ಶ್ರೀಕಾಂತ್ ಟೀಮ್ ಇಂಡಿಯಾ ವೇಗಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದು ಕೂಡ ಏಕವಚನ ಪ್ರಯೋಗಿಸುವ ಮೂಲಕ ಎಂಬುದು ಅಚ್ಚರಿ.

ಹೇ ಸಿರಾಜ್, ನಿನಗೆ ಬುದ್ದಿ ಇಲ್ಲವೇ? ಹುಚ್ಚೇನಾದ್ರು ಹಿಡಿದಿದೆಯಾ?… ಟ್ರಾವಿಸ್ ಹೆಡ್ ನಿಮ್ಮನ್ನ ಬೆಂಡೆತ್ತಿದ್ದಾರೆ. 140 ಎಸೆತಗಳಲ್ಲಿ ಅನಾಯಾಸವಾಗಿ ಸಿಕ್ಸ್-ಫೋರ್​ಗಳನ್ನು ಹೊಡೆದಿದ್ದಾರೆ. ಇದಾಗ್ಯೂ ನೀ ಅವರನ್ನು ಟಾರ್ಗೆಟ್ ಮಾಡ್ತಿದ್ದೀಯಾ ಎಂಬುದೇ ಅಚ್ಚರಿ. ಇದನ್ನೆಲ್ಲಾ ಸ್ಲೆಡ್ಜಿಂಗ್ ಎಂದು ಕರೆಯುತ್ತಾರೆಯೇ? ಎಂದು ಕ್ರಿಸ್ ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ಒಬ್ಬ ಬ್ಯಾಟರ್ 140 ಸ್ಕೋರ್ ಗಳಿಸಿದ್ದಾರೆ. ಅವರಿಗೆ ಕ್ರೆಡಿಟ್ ನೀಡಿ ಮತ್ತು ಅವರ ಆಟವನ್ನು ಶ್ಲಾಘಿಸಿ. ಅತ್ಯುತ್ತಮ ಬ್ಯಾಟಿಂಗ್ ಎಂದೇಳುವ ಬದಲು ನೀವು ತೊಲಗುವಂತೆ ಸೂಚಿಸುತ್ತಿದ್ದೀರಾ? ನೀವು ಹೆಡ್​ನನ್ನು 10 ಅಥವಾ 0 ಕ್ಕೆ ಔಟ್ ಮಾಡಿಲ್ಲ. ನಿಮ್ಮ ವಿರುದ್ಧ ಬರೋಬ್ಬರಿ 141 ಎಸೆತಗಳಲ್ಲಿ 140 ರನ್ ಬಾರಿಸಿದ್ದಾರೆ.

ಇನ್ನು ಈ ಘಟನೆ ಸಂಬಂಧ, ನೀತಿ ಸಂಹಿತೆಯ ಉಲ್ಲಂಘನೆಗಾಗಿ ಮೊಹಮ್ಮದ್ ಸಿರಾಜ್ ಅವರಿಗೆ ಐಸಿಸಿ ಪಂದ್ಯ ಶುಲ್ಕದ 20% ರಷ್ಟು ದಂಡವನ್ನು ವಿಧಿಸಿದೆ. ಹಾಗೆಯೇ ಒಂದು ಡಿಮೆರಿಟ್ ಅಂಕ ನೀಡಿದೆ. ಅತ್ತ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ನಿಯಮ ಉಲ್ಲಂಘನೆಗಾಗಿ ಒಂದು ಡಿಮೆರಿಟ್ ಅಂಕ ನೀಡಲಾಗಿದೆ.

ಮೂರನೇ ದಿನ ಸಿರಾಜ್ ಬ್ಯಾಟಿಂಗ್‌ಗೆ ಬಂದಾಗ, ಹೆಡ್ ಮತ್ತು ಅವರ ನಡುವೆ ಸ್ವಲ್ಪ ಹೊತ್ತು ಮಾತುಕತೆ ನಡೆದಿತ್ತು. ಅವರಿಬ್ಬರೂ ವಿವಾದ ಇತ್ಯರ್ಥಪಡಿಸಿಕೊಂಡರು, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಹೋಗೋಣ ಅಂತ ಹೇಳಿದ್ದರು ಎನ್ನಲಾಗಿದೆ. ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.