ಎಸ್​ಎಂ ಕೃಷ್ಣ ನಿಧನ: ಕರ್ನಾಟಕದಲ್ಲಿ 3 ದಿನ ಶೋಕಾಚರಣೆ, ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಅವರು ನಿಧನರಾಗಿದ್ದಾರೆ. ರಾಜ್ಯ ಸರ್ಕಾರವು ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಇದೇ ವೇಳೆ ಬುಧವಾರ ಸರ್ಕಾರಿ ರಜೆ ಘೋಷಿಸಲಾಗಿದೆ. ಎಸ್​ಎಂ ಕೃಷ್ಣ ಅವರ ಅಂತ್ಯಕ್ರಿಯೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆಯಲಿದೆ.

ಬೆಂಗಳೂರು, ಡಿಸೆಂಬರ್​​ 10: ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್​ಎಂ ಕೃಷ್ಣಅವರು ನಿಧನರಾಗಿದ್ದಾರೆ. ಎಸ್​ಎಂ ಕೃಷ್ಣ ಅವರ ನಿಧನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದೆ. ಇದೇ ವೇಳೆ ಬುಧವಾರ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಡಿಸೆಂಬರ್​ 10 ರಿಂದ ಡಿಸೆಂಬರ್ 12ರವರೆಗೆ ಶೋಕಾಚರಣೆಗೆ ಘೋಷಣೆ ಮಾಡಲಾಗಿದೆ. ಮೂರು ದಿನಗಳ ಕಾಲ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ಅಗಲಿದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಾಗುವುದು.

ಅಂತ್ಯಕ್ರಿಯೆ ಎಲ್ಲಿ?

ಎಸ್​ಎಂ ಕೃಷ್ಣ ಅಂತ್ಯಕ್ರಿಯೆ ಅವರ ತವರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ ನಡೆಯಲಿದೆ. ಎಸ್​ಎಂ ಕೃಷ್ಣಗೆ ಇಷ್ಟವಾದ ಜಾಗದಲ್ಲಿಯೇ, ಅಂದರೆ ಕಾಫಿಡೇ ಆವರಣದಲ್ಲಿ ಅಂತ್ಯಕ್ರಿಯೆ‌ ನಡೆಯಲಿದೆ.

ಬಿಎಸ್​ ಯಡಿಯೂರಪ್ಪ ಸಂತಾಪ

“ಧೀಮಂತ ಮುತ್ಸದ್ಧಿ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ವಿದೇಶಾಂಗ ಸಚಿವರು, ಪಕ್ಷದ ಹಿರಿಯ ನಾಯಕ, ಪದ್ಮವಿಭೂಷಣ ಎಸ್.ಎಂ.ಕೃಷ್ಣ ಅವರು ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ತಿಳಿದು ಅತೀವ ಆಘಾವಾಗಿದೆ. ರಾಷ್ಟ್ರ, ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ಒಬ್ಬ ಹಿರಿಯಣ್ಣನನ್ನು ಕಳೆದುಕೊಂಡ ನೋವು ನನಗಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಕಂಬನಿ ಮಿಡಿದರು.

“ಎಸ್.ಎಂ.ಕೃಷ್ಣ ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಅಗಲಿದ ಆ ಹಿರಿಯ ಚೇತನಕ್ಕೆ ದೇವರು ಉತ್ತಮ ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು, ಅಪಾರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ” ಎಂದು ಸಂತಾಪ ಸೂಚಿಸಿದರು.

ಬೊಮ್ಮಾಯಿ ಸಂತಾಪ

“ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್. ಎಂ. ಕೃಷ್ಣ ಅವರು ನಿಧನರಾಗಿರುವ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. ಮಿತ ಭಾಷಿ, ಸೌಮ್ಯ ಸ್ವಭಾವದ ಎಸ್. ಎಂ. ಕೃಷ್ಣ ಅವರು ಸುಮಾರು ಆರು ದಶಕಗಳ ಕಾಲ ರಾಜ್ಯ ಮತ್ತು ರಾಷ್ಟ್ರ ರಾಜ್ಯಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

“ಬೆಂಗಳೂರಿಗೆ ಐಟಿ ಬಿಟಿ ಕಂಪನಿಗಳನ್ನು ತರುವ ಮೂಲಕ ಬೆಂಗಳೂರಿಗೆ ವಿಶ್ವ ಮಾನ್ಯತೆ ತಂದು ಕೊಟ್ಟಿದ್ದರು. ಅವರ ಅಗಲಿಕೆ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಒಬ್ಬ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ. ಅವರ ನಿಧನವು ನನಗೆ ವೈಯಕ್ತಿಕವಾಗಿ ಅತ್ಯಂತ ನೋವು ತಂದಿದ್ದು, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್​​ ಮಾಡಿದ್ದಾರೆ.