17 ವರ್ಷಗಳ ಬಳಿಕ ಕನಸಾದ ಕನಸು: ಬೆಂಗಳೂರು ಸೇರಿದಂತೆ‌ ರಾಜ್ಯದ‌ ಹಲವೆಡೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ

ಬೆಂಗಳೂರು‌: ಹದಿನೇಳು ವರ್ಷಗಳ ನಂತರ ಇತಿಹಾಸ, ಮೂರು ಬಾರಿ ನಿರಾಸೆ, ಅಸಂಖ್ಯಾತ ಅಭಿಮಾನಿಗಳ ಕನಸು ಕೊನೆಗೂ‌ ನನಸಾಗಿದೆ. ಐಪಿಎಲ್‌ನ 2025ರ ಚಾಂಪಿಯನ್ ಪಟ್ಟವನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮುಡಿಗೇರಿಸಿಕೊಂಡಿದೆ.‌

ಅಹಮದಾಬಾದ್‌‌ನ ನರೇಂದ್ರ ಮೋದಿ ಸ್ಟೇಡಿಯಂ‌ನಲ್ಲಿ ನಡೆದ ಪಂದ್ಯದದಲ್ಲಿ ಪಂಜಾಬ್‌ನ ವಿರುದ್ಧ ಆರ್‌ಸಿಬಿ ಅರ್ಹ ಗೆಲುವು ಸಂಪಾದಿಸಿದೆ. ನೆಚ್ಚಿನ‌ ತಂಡದ ಗೆಲುವಿಗಾಗಿ ಕಾದು ಕುಳಿತಿದ್ದ ಬೆಂಗಳೂರಿನ ಅಭಿಮಾನಿಗಳ ಸಂತಸ ನೂರ್ಮಡಿಯಾಗಿದ್ದು, ಗಲ್ಲಿ ಗಲ್ಲಿಯಲ್ಲಿಯೂ ಸಂಭ್ರಮ ಮನೆ ಮಾಡಿದೆ.

ಬೆಂಗಳೂರಿನಲ್ಲಿ ನೂರಕ್ಕೂ ಅಧಿಕ ಸಾರ್ವಜನಿಕ ಸ್ಥಳಗಳಲ್ಲಿ ಐಪಿಎಲ್ ಫೈನಲ್ ಪಂದ್ಯದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರ್‌ಸಿಬಿಯ ಗೆಲುವು ಖಚಿತವಾಗುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಪಂದ್ಯದ ಬಳಿಕ “ಈ ಸಲ ಕಪ್ ನಮ್ದೆ” ಅಲ್ಲ “ಈ ಸಲ ಕಪ್ ನಮ್ದು” ಎಂದು ವಿರಾಟ್ ಉಚ್ಚರಿಸುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವ ಮೂಲಕ ತಮ್ಮ ಅಭಿಮಾನವನ್ನು ಪ್ರದರ್ಶಿಸಿದ್ದಾರೆ‌.

ಬೆಂಗಳೂರಿನ ಎಂ.ಜಿ. ರಸ್ತೆ, ಇಂದಿರಾನಗರ, ಕೋರಮಂಗಲ, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದ್ದು, ಅಭಿಮಾನಿಗಳು ಆರ್‌ಸಿಬಿಗೆ ಜೈ ಕಾರ ಮೊಳಗಿಸುತ್ತಾ ರೋಡ್​ ಶೋನಲ್ಲಿ ನಿರತರಾಗಿದ್ದಾರೆ.

ಈ ಸಲ ಕಪ್ ನಮ್ದೆ ಅಲ್ಲ.. ನಮ್ಮದು ಅಂತಿದ್ದಾರೆ ಅಭಿಮಾನಿಗಳು: RCB ತಂಡವು ಫೈನಲ್​ನಲ್ಲಿ ಗೆಲ್ಲಬೇಕೆಂದು ಅಭಿಮಾನಿಗಳು ಪ್ರಾರ್ಥಿಸಿದ ದೇವರುಗಳೇ ಇರಲಿಲ್ಲ. ರಾಜ್ಯ ಸೇರಿದಂತೆ ದೇಶದಲ್ಲಿರುವ ಕೋಟ್ಯಾಂತರ ಅಭಿಮಾನಿಗಳು ಹಾರೈಸಿದ್ದರು. ಆರ್​ಸಿಬಿ ಕಪ್​​ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ದೀಪಾವಳಿ ಹಬ್ಬ ಬಂದಿತೇನು ಎಂಬಂತೆ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದರು.

ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ: ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಆರ್​ಸಿಬಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಗರದ ಚೆನ್ನಮ್ಮ ವೃತ್ತ ಹಾಗೂ ಧಾರವಾಡ ಜಿಬ್ಲಿ ಸರ್ಕಲ್​ನಲ್ಲಿ‌ ಜಮಾವಣೆಗೊಂಡ ಸಾವಿರಾರು ಅಭಿಮಾನಿಗಳು ಕೇಕೆ ಹಾಕಿ ಕುಣಿದು ‌ಕುಪ್ಪಳಿಸಿದರು.

ಜೈ ಆರ್​ಸಿಬಿ ಘೋಷಣೆಗಳು‌ ಮೊಳಗಿದವು‌. ನಗರದ ಪ್ರತಿ ಬಡಾವಣೆ ಹಾಗೂ ಚಿಕ್ಕ ಪುಟ್ಟ ಕಾಲೊನಿಗಳಲ್ಲಿಯೂ‌ ಅಭಿಮಾನಿಗಳ ಸಂಭ್ರಮ ಮುಗಿಲು‌ಮುಟ್ಟಿತ್ತು. ಯುವಕರು ‌ಹಾಗೂ ಯುವತಿಯರು ರಾತ್ರಿ ಎನದೆ ಬೈಕ್​ಗಳಲ್ಲಿ ನಗರ ಪ್ರದಕ್ಷಿಣೆ ಹಾಕುವ ಮೂಲಕ ಆರ್​ಸಿಬಿ ಜಯವನ್ನು ಸಂಭ್ರಮಿಸಿದರು.