ಕಿಂಗ್ ಕೊಹ್ಲಿ ಈಗ ಭಾರತದ ನಂ.1 ಫಿಲ್ಡರ್; 25 ವರ್ಷಗಳ ಹಳೆಯ ದಾಖಲೆ ಉಡೀಸ್

Virat Kohli catches: ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್‌ಗಳನ್ನು ಹಿಡಿದರು. ಇದರಿಂದ ಅವರು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಭಾರತೀಯ ಫೀಲ್ಡರ್ ಎನಿಸಿಕೊಂಡರು. ಅವರ 157ನೇ ಕ್ಯಾಚ್‌ನೊಂದಿಗೆ ಮೊಹಮ್ಮದ್ ಅಜರುದ್ದೀನ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು. ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದವರ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಅದರಲ್ಲಿ ಮೊದಲ ಕ್ಯಾಚ್ ಹಿಡಿಯುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆಯನ್ನು ನಿರ್ಮಿಸಿದರು.

ದುಬೈನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಿ ಪಾಕಿಸ್ತಾನವನ್ನು 241 ರನ್‌ಗಳಿಗೆ ಆಲೌಟ್ ಮಾಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಪಾಕಿಸ್ತಾನವನ್ನು ಆಲ್ ಔಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಾಕಿಸ್ತಾನದ ಇನ್ನಿಂಗ್ಸ್‌ನ 47 ನೇ ಓವರ್‌ನಲ್ಲಿ ವಿರಾಟ್, ಕುಲ್ದೀಪ್ ಯಾದವ್ ಅವರ ಬೌಲಿಂಗ್‌ನಲ್ಲಿ ನಸೀಮ್ ಶಾ ಲಾಂಗ್ ಆನ್‌ನಲ್ಲಿ ನೀಡಿದ ಸುಲಭ ಕ್ಯಾಚ್ ಅನ್ನು ಹಿಡಿಯುವ ಮೂಲಕ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಫೀಲ್ಡರ್ ಎನಿಸಿಕೊಂಡರು.

ಇದು 299ನೇ ಪಂದ್ಯ ಆಡುತ್ತಿರುವ ವಿರಾಟ್ ಅವರ 157ನೇ ಕ್ಯಾಚ್ ಆಗಿತ್ತು. ಇದರೊಂದಿಗೆ ಅವರು ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ (156) ದಾಖಲೆಯನ್ನು ಮುರಿದರು. ಅಜರುದ್ದೀನ್ ತನ್ನ ಕೊನೆಯ ಕ್ಯಾಚ್ ಅನ್ನು ಸುಮಾರು 25 ವರ್ಷಗಳ ಹಿಂದೆ ಮೇ 2000 ದಲ್ಲಿ ಹಿಡಿದಿದ್ದರು. ಅಂದಿನಿಂದ, ಯಾವುದೇ ಭಾರತೀಯ ಫೀಲ್ಡರ್ ಅವರ ಹತ್ತಿರ ಬರಲು ಸಾಧ್ಯವಾಗಿರಲಿಲ್ಲ.

ಆದರೆ ಈಗ 25 ವರ್ಷಗಳ ನಂತರ ಕೊಹ್ಲಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದವರ ಪಟ್ಟಿಯಲ್ಲಿ ಕೊಹ್ಲಿ ಈಗ ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಹೆಸರಲ್ಲಿದೆ, ಅವರು 218 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಪಾಕಿಸ್ತಾನ ತಂಡದ ಕೊನೆಯ ಬ್ಯಾಟ್ಸ್‌ಮನ್‌ ನೀಡಿದ ಸುಲಭ ಕ್ಯಾಚ್ ಅನ್ನು ಹಿಡಿದರು. ಇದರೊಂದಿಗೆ ಇದೀಗ ಕೊಹ್ಲಿ ಖಾತೆಯಲ್ಲಿ 158 ಏಕದಿನ ಕ್ಯಾಚ್‌ಗಳಿವೆ. ಪ್ರಸ್ತುತ ಟೂರ್ನಿಯಲ್ಲಿ ಅವರು 2 ಪಂದ್ಯಗಳಲ್ಲಿ 4 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಇದಕ್ಕೂ ಮೊದಲು ಅವರು ಬಾಂಗ್ಲಾದೇಶ ವಿರುದ್ಧ ಎರಡು ಕ್ಯಾಚ್‌ಗಳನ್ನು ಹಿಡಿದಿದ್ದರು.