Champions Trophy; ಟೀಂ ಇಂಡಿಯಾ ಗೆಲುವಿಗಾಗಿ ಮಹಾ ಕುಂಭದಲ್ಲಿ ವಿಶೇಷ ಪೂಜೆ

ಲಕ್ನೋ: ಇಂದು ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ಹಿನ್ನೆಲೆ ದೇಶದ ಹಲವೆಡೆ ಕ್ರಿಕೆಟ್ ಅಭಿಮಾನಿಗಳು ಭಾರತದ ಗೆಲುವಿಗಾಗಿ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಅದೇ ರೀತಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲೂ ಟೀಂ ಇಂಡಿಯಾ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ (ಇಂದು) ಬದ್ಧ ವೈರಿ ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯಲ್ಲಿದೆ. ಹಾಗೆಯೇ ಮೊಹಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ, ಟೂರ್ನಿಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ. 

ಬಾಂಗ್ಲಾದೇಶ ಎದುರು ಆರು ವಿಕೆಟ್‌ಗಳ ಜಯ ಸಾಧಿಸಿರುವ ಟೀಮ್ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದರೆ, ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತಿರುವ ಪಾಕಿಸ್ತಾನ, ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ ಪಂದ್ಯ ತೀವ್ರ ಹೈವೋಲ್ಟೇಜ್ ಪಡೆಯುವ ನಿರೀಕ್ಷೆಯಿದ್ದು, ಅಭಿಮಾನಿಗಳಿಗೆ ರಸದೌತಣ ಉಣಬಡಿಸುವ ಸಾಧ್ಯತೆ ಇದೆ. ಉಪಖಂಡದ ಎದುರಾಳಿಗಳಾದ ಭಾರತ-ಪಾಕ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯದಾಗಿ 2017ರ ಫೈನಲ್‌ನಲ್ಲಿ ಎದುರಾಗಿದ್ದವು. ಆ ಪಂದ್ಯದಲ್ಲಿ ಪಾಕಿಸ್ತಾನ 180 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿ ಮೊದಲ ಸಲ ಚಾಂಪಿಯನ್ ಆಗಿತ್ತು. ಈಗ ರಿಜ್ವಾನ್ ಮತ್ತು ತಂಡ ಆ ಜಯದ ಸ್ಫೂರ್ತಿ ಪಡೆಯಲು ಹಾತೊರೆಯುತ್ತಿದೆ. ಆದರೆ ಎಲ್ಲಾ ವಿಭಾಗಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ. 

ಸದಾ ತೀವ್ರತೆಯನ್ನುಂಟು ಮಾಡುವ ಉಭಯ ರಾಷ್ಟ್ರಗಳ ನಡುವಿನ ಪಂದ್ಯವು ದುಬೈನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳಲ್ಲಿ ಶಾಂತತೆ ನೆಲೆಯೂರಿದೆ. ಕರಾಚಿಯಲ್ಲಿ ಕಿವೀಸ್ ವಿರುದ್ಧ ಸೋತ ನಂತರ ದುಬೈಗೆ ಆಗಮಿಸಿರುವ ಪಾಕ್, ಸ್ಥಳೀಯ ವಾತಾವರಣಕ್ಕೆ ಈಗಾಗಲೇ ಹೊಂದಿಕೊಂಡಿದೆ.