ಮಂಡ್ಯದಲ್ಲಿ ನಾಡಬಾಂಬ್ ಸ್ಫೋಟ , ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

ಮಂಡ್ಯ, ಫೆಬ್ರವರಿ 23: ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯಬೆಟ್ಟದಲ್ಲಿ ನಾಡಬಾಂಬ್​ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹರಿಯಂತ್ ಪಾಟೀಲ್, ಪಾರ್ಥ ಗಾಯಗೊಂಡ ವಿದ್ಯಾರ್ಥಿಗಳು. ಹರಿಯಂತ್ ಪಾಟೀಲ್ ಮತ್ತು ಪಾರ್ಥ ಜೈನಬಸದಿ ಶಾಲೆಯಲ್ಲಿ ಓದುತ್ತಿದ್ದಾರೆ.

ವಿದ್ಯಾರ್ಥಿಗಳು ರವಿವಾರ (ಫೆ.23) ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ಕೆ ತೆರಳಿದ್ದರು. ಸ್ವಚ್ಛತೆ ಮಾಡುವಾಗ ಕಸದ ರಾಶಿಗೆ ವಿದ್ಯಾರ್ಥಿಗಳು ಕೈ ಹಾಕುತ್ತಿದ್ದಂತೆ ನಾಡ ಬಾಂಬ್​ ಸ್ಫೋಟಗೊಂಡಿದೆ. ಸ್ಫೋಟದ ತೀರ್ವತೆಗೆ ಓರ್ವನ ಅಂಗೈ ಛಿದ್ರಗೊಂಡಿದೆ. ಮತ್ತೊಬ್ಬನ ಮುಖದ ಭಾಗಕ್ಕೆ ಗಾಯವಾಗಿದೆ.

ಕಾಡು ಹಂದಿ ಬೇಟೆಗೆ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.