IND vs PAK: 6 ಎಸೆತಗಳಲ್ಲಿ 2 ಕ್ಯಾಚ್‌ಗಳನ್ನು ಕೈಚೆಲ್ಲಿದ ಟೀಂ ಇಂಡಿಯಾ

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಉತ್ತಮ ಆರಂಭ ಪಡೆದು ಬಾಂಗ್ಲಾದೇಶವನ್ನು ಸೋಲಿಸಿತು. ಆದರೆ ಈ ಗೆಲುವಿನ ಹೊರತಾಗಿಯೂ, ತಂಡದ ಫೀಲ್ಡಿಂಗ್ ತುಂಬಾ ನಿರಾಶಾದಾಯಕವಾಗಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 2 ಸುಲಭ ಕ್ಯಾಚ್‌ಗಳನ್ನು ಕೈಬಿಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಈ ತಪ್ಪನ್ನು ಸರಿಪಡಿಸಿಕೊಂಡು ಕಣಕ್ಕಿಳಿಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ಫಿಲ್ಡರ್​ಗಳು ಮತ್ತದೇ ಹಳೆಯ ತಪ್ಪನ್ನು ಮಾಡಿದ್ದಾರೆ. ಕೇವಲ 6 ಎಸೆತಗಳಲ್ಲಿ 2 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.

ಫೆಬ್ರವರಿ 23, ಭಾನುವಾರ ದುಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ, ಟೀಂ ಇಂಡಿಯಾದ ಫೀಲ್ಡಿಂಗ್‌ನಲ್ಲಿ ಎರಡು ವಿಭಿನ್ನ ಅಂಶಗಳು ಕಂಡುಬಂದವು. ಒಂದೆಡೆ, ಅಕ್ಷರ್ ಪಟೇಲ್ ಚಿರತೆಯ ವೇಗದೊಂದಿಗೆ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಅವರನ್ನು ರನ್ ಔಟ್ ಮಾಡಿದರೆ, ಇನೊಂದೆಡೆ ತಂಡದ ಇಬ್ಬರು ಆಟಗಾರರು ಕ್ಯಾಚ್‌ಗಳನ್ನು ಕೈಚೆಲ್ಲಿ ಎಲ್ಲರನ್ನೂ ನಿರಾಶೆಗೊಳಿಸಿದರು. ಇದರಿಂದಾಗಿ ಹಾರ್ದಿಕ್ ಪಾಂಡ್ಯ ಕೂಡ ಕೋಪಗೊಂಡರು.

ಕ್ಯಾಚ್ ಬಿಟ್ಟ ಹರ್ಷಿತ್ ರಾಣಾ

ಇದೆಲ್ಲವೂ ಪಾಕಿಸ್ತಾನದ ಇನ್ನಿಂಗ್ಸ್‌ನ 33 ನೇ ಓವರ್‌ನಲ್ಲಿ ಸಂಭವಿಸಿತು. ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ನಡುವೆ ಅದ್ಭುತ ಶತಕದ ಜೊತೆಯಾಟವಿತ್ತು. ಹೀಗಾಗಿ ಟೀಂ ಇಂಡಿಯಾ ವಿಕೆಟ್ ಹುಡುಕುತ್ತಿತ್ತು. ಇದಕ್ಕೆ ಪೂರಕವಾಗಿ 33ನೇ ಓವರ್‌ನ ಕೊನೆಯ ಎಸೆತದಲ್ಲಿ ರಿಜ್ವಾನ್ ಗಾಳಿಯಲ್ಲಿ ಆಡಿದರು. ಇಲ್ಲಿ ಹರ್ಷಿತ್ ರಾಣಾ ಚೆಂಡನ್ನು ಹಿಡಿಯಲು ಹಿಂದಕ್ಕೆ ಓಡಿ ಬಂದರು. ಹಿಂದಕ್ಕೆ ಓಡುವಾಗ ಕ್ಯಾಚ್ ಹಿಡಿಯಬೇಕಾಗಿತ್ತು, ಆದರೆ ಚೆಂಡನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗದೆ ಡೈವಿಂಗ್ ಮಾಡುವ ತಪ್ಪನ್ನು ಮಾಡಿದರು. ಇದರಿಂದಾಗಿ ಕ್ಯಾಚ್ ಮಿಸ್ ಆಯಿತು.

ಮತ್ತೊಂದು ಕ್ಯಾಚ್ ಡ್ರಾಪ್

ಆದರೆ, ಮುಂದಿನ ಓವರ್‌ನಲ್ಲಿಯೇ ರಿಜ್ವಾನ್ (46) ಅವರನ್ನು ಬೌಲ್ಡ್ ಮಾಡುವ ಮೂಲಕ ಅಕ್ಷರ್ ಪಟೇಲ್ ತಂಡವನ್ನು ಆಗುತ್ತಿದ್ದ ನಷ್ಟದಿಂದ ಪಾರು ಮಾಡಿದರು. ಅದೇ ಓವರ್‌ನ ಐದನೇ ಎಸೆತದಲ್ಲಿ ಕುಲ್ದೀಪ್ ಯಾದವ್ ಸೌದ್ ಶಕೀಲ್ ಕ್ಯಾಚ್ ಅನ್ನು ಕೈಬಿಟ್ಟರು. ಲಾಂಗ್ ಆನ್‌ನಲ್ಲಿ ನಿಂತಿದ್ದ ಕುಲ್ದೀಪ್​ಗೆ ಕ್ಯಾಚ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತ ತಂಡ ಮತ್ತೊಂದು ವಿಕೆಟ್ ಪಡೆಯುವ ಅವಕಾಶವನ್ನು ಕಳೆದುಕೊಂಡಿತು. ಕೇವಲ ಆರು ಎಸೆತಗಳಲ್ಲಿ ಎರಡು ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಆಘಾತಕ್ಕಾರಿಯಾಗಿತ್ತು. ಆದರೆ ಹಾರ್ದಿಕ್ ಪಾಂಡ್ಯ ತಮ್ಮ ಮುಂದಿನ ಓವರ್‌ನಲ್ಲಿ ಸೌದ್ ಶಕೀಲ್ (62) ಅವರನ್ನು ಔಟ್ ಮಾಡಿದರು.