
ಆನೇಕಲ್ (ಬೆಂಗಳೂರು): ಅಳಿವಿನಂಚಿನಲ್ಲಿರುವ ನಾಲ್ಕು ಮುಳ್ಳು ಹಂದಿಗಳನ್ನು ಬೇಟೆಯಾಡಿ, ಮಾಂಸ ಸಾಗಾಟ ಸಮಯದಲ್ಲಿ ಬನ್ನೇರುಘಟ್ಟ ಅರಣ್ಯಾಧಿಕಾರಿಗಳ ಕಂಡು ಇಬ್ಬರು ಆರೋಪಿಗಳು ಪರಾರಿಯಾದ ಘಟನೆ ನಡೆದಿದೆ.
ಬನ್ನೇರುಘಟ್ಟದ ಭೂತಾನಹಳ್ಳಿ ಶಿಲೀಂದ್ರದೊಡ್ಡಿಯ ಕಾಂಡಂಚಿನ ಬನ್ನೇರುಘಟ್ಟ ಕಾವಲ್ ಸರ್ವೆ ನಂಬರ್ವೊಂದರ ದೂಡಿ ಜಾಗದಲ್ಲಿ ಮಾಂಸ ಸಾಗಾಟದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಕಣ್ಣಿಗೆ ಇಬ್ಬರು ಆರೋಪಿಗಳು ಬಿದ್ದಿದ್ದಾರೆ. ಕಲ್ಕೆರೆ ರಾಜ್ಯ ವನ್ಯಜೀವಿ ವಲಯದ ಹಕ್ಕಿಪಿಕ್ಕಿ ಕಾಲೊನಿಯ ಬಳಿಯೇ ಘಟನೆ ನಡೆದಿದೆ.
ಆರೋಪಿಗಳನ್ನು ನಾಗರಾಜು (25) ಮತ್ತು ನಂಜ (28) ಎಂದು ಗುರುತಿಸಲಾಗಿದೆ. ಇವರು ಹಕ್ಕಿಪಿಕ್ಕಿ ಕಾಲೊನಿಯವರಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ಮುಳ್ಳು ಹಂದಿಗಳ 27 ಕೆ.ಜಿ ಮಾಂಸ ಮತ್ತು ಅವುಗಳ ರಕ್ತ ತುಂಬಿದ್ದ ಕವರ್ ಜೊತೆಗೆ ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಲ್ಕೆರೆ ವಲಯ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ಧಾರೆ.
ಮುಳ್ಳು ಹಂದಿಯ ರಕ್ತವು ಔಷಧಿ ಗುಣವುಳ್ಳದ್ದಾಗಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಆನೇಕಲ್ ಭಾಗದಲ್ಲಿ ಬೇಟೆಗಾರರು ಹೆಚ್ಚಿನ ಬೆಲೆಗೆ ಅದನ್ನು ಮಾರಾಟ ಮಾಡುತ್ತಾರೆ. ರಕ್ತವನ್ನು ಒಂದು ಪ್ಲಾಸ್ಟಿಕ್ ಕವರ್ ತುಂಬಿಕೊಂಡು, ಮಾಂಸ ಸಾಗಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ಅರಣ್ಯ ಸಂರಕ್ಷಕರ ಕಣ್ಣಿಗೆ ಬಿದ್ದ ಆರೋಪಿಗಳು ಬೈಕ್ ಮತ್ತು ಮಾಂಸ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಮಂಗಳವಾರ ಸಂಜೆ ಆರ್ಎಫ್ಒ ಶಂಕರ್, ಡಿಆರ್ಎಫ್ಒ ಹರ್ಷವರ್ಧನ್ ಅವರು ಆನೇಕಲ್ ನ್ಯಾಯಾಲಯಕ್ಕೆ ಪ್ರಥಮ ವರದಿ ಸಲ್ಲಿಸಿ, ಅನುಮತಿ ಪಡೆದು ಮಾಂಸ ಮತ್ತು ರಕ್ತವನ್ನು ಮಣ್ಣಿನಲ್ಲಿ ಹುದುಗಿಸಲು ತಯಾರಿ ನಡೆಸಿದ್ದಾರೆ.
ನಂತರ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗುವುದು ಎಂದು ಆರ್ಎಫ್ಒ ಶಂಕರ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಆರ್ಎಫ್ಒ ಉದಯ್ ಕುಮಾರ್, ಸಿಬ್ಬಂದಿಯಾದ ವಿನಯ್, ಕುಮಾರ್, ರಾಜಾ, ಶಿವ ಪಾಲ್ಗೊಂಡಿದ್ದರು.



