ಜೈಪುರ: ಜಾಮ್ವರಮ್‌ಗಢದ ರೈಸರ್ ಪೊಲೀಸ್ ಠಾಣೆ ವ್ಯಾಪ್ತಿಯ ದೌಸಾ-ಮನೋಹರ್‌ಪುರ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ವಧು-ವರ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಮದುವೆ ಮುಗಿಸಿಕೊಂಡು ಮಧ್ಯಪ್ರದೇಶದಿಂದ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಭಟ್ಕಾಬಾಸ್ ಗ್ರಾಮದ ಬಳಿ ಟ್ರಕ್ಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಸುಮಾರು ಆರೇಳು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿ ವಧು-ವರ ಮತ್ತು ಅವರ ಕುಟುಂಬಸ್ಥರಿದ್ದರು. ಅಪಘಾತದ ನಂತರ, ದೌಸಾ – ಮನೋಹರಪುರ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ರೈಸರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಘುವೀರ್ ಸಿಂಗ್ ರಾಥೋಡ್ ಮಾತನಾಡಿ, ರೈಸರ್ ಪೊಲೀಸ್ ಠಾಣೆ ವ್ಯಾಪ್ತಿಯ ದೌಸಾ-ಮನೋಹರ್‌ಪುರ ಹೆದ್ದಾರಿಯ (NH-148) ಭಟ್ಕಾಬಾಸ್ ಗ್ರಾಮದ ಬಳಿ ಟ್ರಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿದ್ದು, ಸುಮಾರು ಆರೇಳು ಮಂದಿ ಗಾಯಗೊಂಡಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿಸಿದರು.
