ಶಿವಮೊಗ್ಗ: ಕಾರಿಗೆ ಖಾಸಗಿ ಬಸ್​​ ಡಿಕ್ಕಿ; ಓರ್ವ ಸಾವು, ಎಂಟು ಮಂದಿಗೆ ಗಾಯ

ಶಿವಮೊಗ್ಗ: ಖಾಸಗಿ ಬಸ್​​ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿ, ಬಸ್​ನಲ್ಲಿದ್ದ ಎಂಟು ಮಂದಿಗೆ ಗಾಯವಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ಇಂದು ಬೆಳಗಿನ ಜಾವ 5 ಗಂಟೆಗೆ ನಡೆದಿದೆ.

ವಿವೇಕ್​ ಟ್ರಾವೆಲ್ಸ್​​ನ ಬಸ್ ಎಲ್​ಎಲ್​ಆರ್​ ರಸ್ತೆಯಲ್ಲಿ ಬರುತ್ತಿರುವಾಗ ಸವಾರ್ ಲೈನ್ ರಸ್ತೆಯಿಂದ ಕಾರೊಂದು ಏಕಾಏಕಿ ನುಗ್ಗಿದೆ. ಈ ವೇಳೆ ಬಸ್​ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಪ್ರದೀಪ್ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಡಿಕ್ಕಿ ಹೊಡೆದ ಬಸ್​ ರಸ್ತೆ ಪಕ್ಕದ ಫುಟ್ ಪಾತ್ ಮೇಲೇರಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್​ನಲ್ಲಿದ್ದ ಎಂಟು ಮಂದಿಗೆ ಗಾಯಗಳಾಗಿವೆ. ತಕ್ಷಣ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪಶ್ಚಿಮ ಸಂಚಾರಿ ಪೊಲೀಸರು ಭೇಟಿ‌ ನೀಡಿ ಬಸ್​ನ್ನು ತೆರವುಗೊಳಿಸುವ ಪ್ರಯತ್ನ ನಡೆಸಿದರು.