ಕಾಲ್ತುಳಿತ ದುರಂತವು ಸರ್ಕಾರದ ನಿರ್ಲಕ್ಷ್ಯ & ಬೇಜವಾಬ್ದಾರಿತನದಿಂದ ಸಂಭವಿಸಿದ “ಹತ್ಯಾಕಾಂಡ”- ಕಾಗೇರಿ

ಶಿರಸಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತವು ಅತ್ಯಂತ ಆಘಾತಕಾರಿ ಮತ್ತು ಹೃದಯ ವಿದ್ರಾವಕ ಸಂಗತಿ. ಈ ಘಟನೆಯು ಕೇವಲ ಒಂದು ದುರಂತವಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಸಂಭವಿಸಿದ “ಹತ್ಯಾಕಾಂಡ” ಎಂದು ಸಂಸದ ವಿಶ್ವೇಶ್ವರ ಹೆಗಡೆ‌ ಕಾಗೇರಿ ಕಿಡಿಕಾರಿದ್ದಾರೆ.
ಸರ್ಕಾರವು ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗಿದ್ದರೂ, ಇಲ್ಲಿ ಅದು ಸಂಪೂರ್ಣವಾಗಿ ವಿಫಲವಾಗಿದೆ. ಜನರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸಿರುವ ಸರ್ಕಾರದ ನಡೆ ಅತ್ಯಂತ ಖಂಡನೀಯ ಎಂದಿರುವ ಸಂಸದರು, ಈ ದುರ್ಘಟನೆಯಲ್ಲಿ ಅಸುನೀಗಿದ ಎಲ್ಲರಿಗೂ ಸಂತಾಪಗಳನ್ನು ಸಲ್ಲಿಸುವದಾಗಿ ತಿಳಿಸಿದ್ದಾರೆ.
ಮೃತರ ಕುಟುಂಬಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ‌ ಕಾಗೇರಿ, ಅತ್ಯಂತ ದುಃಖದ ಸಂಗತಿಯೆಂದರೆ, ಈ ಭೀಕರ ಕಾಲ್ತುಳಿತದಲ್ಲಿ ಸಿದ್ದಾಪುರದ ಅಕ್ಷತಾ ಪೈ ಅವರು ಅಕಾಲಿಕ ಮರಣವಪ್ಪಿದ್ದಾರೆ. ಅವರ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಈ ಹಠಾತ್ ಅಗಲಿಕೆ ನಮ್ಮೆಲ್ಲರಿಗೂ ತೀವ್ರ ನೋವನ್ನುಂಟುಮಾಡಿದೆ.
ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಸರ್ಕಾರ ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಮೊದಲು ಸಮಗ್ರ ಸುರಕ್ಷತಾ ಯೋಜನೆಗಳನ್ನು ಕಡ್ಡಾಯಗೊಳಿಸಬೇಕು. ಜನರ ಜೀವದೊಂದಿಗೆ ಚೆಲ್ಲಾಟವಾಡಬಾರದು ಎಂದೂ ರಾಜ್ಯ ಸರಕಾರಕ್ಕೆ ಪ್ರಕಟನೆ ಮೂಲಕ ಸೂಚಿಸಿದ್ದಾರೆ.