
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ತೀರದ ರೈತರು ಮತ್ತು ಎಲೆ ವ್ಯಾಪಾರಸ್ಥರು ಹೊನ್ನಾವರ ದ ‘ರಾಣಿ ವೀಳ್ಯದೆಲೆ’ಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡದಿರುವ ತಮ್ಮ ನಿರ್ಧಾರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ, ಭಾರತವು ಪಾಕಿಸ್ತಾನದೊಂದಿಗಿನ ವ್ಯಾಪಾರ ಮತ್ತು ನೀರಿನ ಹಂಚಿಕೆಯನ್ನು ಸ್ಥಗಿತಗೊಳಿಸಿರುವಾಗ, ಹೊನ್ನಾವರದ ರೈತರು ತೋರಿದ ಈ ದೇಶಪ್ರೇಮ ಮತ್ತು ಬದ್ಧತೆ ನಿಜಕ್ಕೂ ಅಭಿನಂದನಾರ್ಹ.
‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವು ಒಂದು ದೊಡ್ಡ ಮಾರುಕಟ್ಟೆಯಾಗಿದ್ದರೂ ಸಹ, ನಮ್ಮ ರೈತರು ಯಾವುದೇ ಆಮಿಷಕ್ಕೆ ಒಳಗಾಗದೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದು ಅವರ ಉನ್ನತ ದೇಶಭಕ್ತಿಯನ್ನು ಎತ್ತಿ ತೋರಿಸುತ್ತದೆ. ಒಂದು ವೇಳೆ ಅಕ್ರಮ ಮಾರ್ಗಗಳ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುವುದು ಕಂಡುಬಂದರೆ, ತಾವು ಎಲೆ ಬೆಳೆಯುವುದನ್ನೇ ನಿಲ್ಲಿಸುವುದಾಗಿ ಅವರು ನೀಡಿರುವ ಎಚ್ಚರಿಕೆ ಅವರ ದೃಢ ಸಂಕಲ್ಪವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಈ ರೈತರು ಕೇವಲ ತಮ್ಮ ಆರ್ಥಿಕ ಲಾಭವನ್ನು ಮಾತ್ರ ಪರಿಗಣಿಸದೆ, ದೇಶದ ಹಿತಾಸಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಇಂತಹ ದೇಶಪ್ರೇಮಿ ರೈತರು ನಮ್ಮ ನಾಡಿನ ಹೆಮ್ಮೆ. ಅವರ ಈ ಆದರ್ಶ ನಿರ್ಧಾರವು ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ ಎಂದ ಕಾಗೇರಿ, “ದೇಶ ಮೊದಲು, ಆಮೇಲೆ ಉಳಿದದ್ದು” ಎಂಬ ಅವರ ನಿಲುವು ನಿಜಕ್ಕೂ ಅನುಕರಣೀಯ ಎಂದಿದ್ದಾರೆ.
ಈ ಸಂದರ್ಭದಲ್ಲಿ, ರೈತರು ಮತ್ತು ವ್ಯಾಪಾರಸ್ಥರ ಈ ನಿಸ್ವಾರ್ಥ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

