ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ. ಸರ್ಕಾರದ ಭದ್ರತಾ ವೈಫಲ್ಯದ ಆರೋಪ ಕೇಳಿಬಂದಿದೆ. ಸರ್ಕಾರ ಸಾವನ್ನಪ್ಪಿದವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದೀಗ ಆರ್‌ಸಿಬಿ ಫ್ರಾಂಚೈಸಿ ಕೂಡ ಪರಿಹಾರ ನೀಡುವುದಾಗಿ ಘೋಷಿಸಿವೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಸರ್ಕಾರದ ಭದ್ರತಾ ವೈಫಲ್ಯದಿಂದಾಗಿ ಈ ಸಾವು ನೋವು ಉಂಟಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಸರ್ಕಾರ ಮಾತ್ರ ಇದನ್ನು ಒಪ್ಪಲು ಸಿದ್ಧವಿಲ್ಲ. ಆದಾಗ್ಯೂ ಸರ್ಕಾರದ ವತಿಯಿಂದ ಈ ಅವಘಡದಲ್ಲಿ ಸಾವಿಗೀಡದವರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ಘೋಷಿಸಲಾಗಿತ್ತು. ಹಾಗೆಯೇ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡಿತ್ತು. ಸರ್ಕಾರದ ಬಳಿಕ ಕೆಎಸ್ಸಿಎ ಕೂಡ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಧನವಾಗಿ 5 ಲಕ್ಷ ನೀಡುವುದಾಗಿ ಹೇಳಿತ್ತು. ಇದೀಗ ಆರ್‌ಸಿಬಿ ಫ್ರಾಂಚೈಸಿ ಕೂಡ ಮಡಿದ ಆರ್‌ಸಿಬಿ ಅಭಿಮಾನಿಗಳ ಕುಟುಂಬಗಳ ನೆರವಿಗೆ ಮುಂದಾಗಿದೆ.ಅಲ್ಲದೆ ಈ ಅವಘಡದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಭಿಮಾನಿಗಳ ಚಿಕಿತ್ಸೆಗಾಗಿ ಆರ್‌ಸಿಬಿ ಕೇರ್ ನಿಧಿಯನ್ನು ಸಹ ರಚನೆ ಮಾಡಲಾಗಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ, ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವಾಗ ಕಾಲ್ತುಳಿತ ಸಂಭವಿಸಿತು, ಇದರಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡರೆ, 20 ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
