‘ಕಾಂಗ್ರೆಸ್ ಶಾಸಕರು, ಸಂಸದರ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ’ -ಪೊನ್ನಣ್ಣ

ಬೆಂಗಳೂರು: ಕಾಂಗ್ರೆಸ್ ಶಾಸಕರು, ಸಂಸದರ ಮೇಲೆ ಇಡಿ ದಾಳಿ ಮಾಡಿರೋದು ರಾಜಕೀಯ ಪ್ರೇರಿತ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಇಡಿ ವಿರುದ್ಧ ಕಿಡಿಕಾರಿದ್ದಾರೆ.

ಇಡಿ ದಾಳಿ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡಿ ಅವರು ವಾಲ್ಮೀಕಿ ಪ್ರಕರಣ ತನಿಖೆ ಮಾಡುತ್ತಿರುವುದೇ ಕಾನೂನುಬಾಹಿರ. ಇದೊಂದು ರಾಜಕೀಯ ಪ್ರೇರಿತ ದಾಳಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಈಗಾಗಲೇ ವಾಲ್ಮೀಕಿ ಕೇಸ್‌ನಲ್ಲಿ ತನಿಖೆ ಮುಗಿದು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಚಾರ್ಜ್ ಶೀಟ್ ವಿರುದ್ಧ ನಾಗೇಂದ್ರ ಕೋರ್ಟ್ ಮೊರೆ ಹೋಗಿದ್ದಾರೆ. ಈಗ ದಾಳಿ ಮಾಡಿರೋದು ನೋಡಿದ್ರೆ ಇಡಿ ಅಧಿಕಾರ ವ್ಯಾಪ್ತಿ ಏನು ಎಂದು ಪ್ರಶ್ನೆ ಮಾಡಬೇಕಾಗಿದೆ.ಇದೇನು ಮರು ತನಿಖೆನಾ? ಏನು ಗೊತ್ತಿಲ್ಲ. ಇದೊಂದು ರಾಜಕೀಯ ಪ್ರೇರಿತ ದಾಳಿ ಅಲ್ಲದೇ ಏನು ಅಲ್ಲ ಎಂದು ತಿಳಿಸಿದರು. 

ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಇದನ್ನು ಸಹಿಸೋಕೆ ಆಗುತ್ತಿಲ್ಲ. ಹೀಗಾಗಿ ಇದೆಲ್ಲ ಮಾಡುತ್ತಿದ್ದಾರೆ. ಮಂಗಳವಾರ ಮುಡಾ ಕೇಸ್‌ನಲ್ಲಿ 100 ಕೋಟಿ ಜಪ್ತಿ ಎಂದು ರಿಲೀಸ್ ಮಾಡಿದ್ದಾರೆ. ಜನರನ್ನು ದಾರಿ ತಪ್ಪಿಸೋಕೆ ಇಡಿ ಹೀಗೆ ಮಾಡುತ್ತಿದೆ. ವಿಪಕ್ಷಕ್ಕೆ ಲಾಭ ಮಾಡಲು ಹೀಗೆ ಮಾಡಲಾಗುತ್ತಿದೆ. ಇದು ಖಂಡನೀಯ, ರಾಜಕೀಯ ಪ್ರೇರಿತ. ಇದನ್ನು ವಿರೋಧ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.