ಅಂಕೋಲಾ : ನೀಲಿ ಕಲ್ಲು ತೆಗೆಯಲು ಹೋದ ಶಾಲಾ ಬಾಲಕಿ ದುರ್ಮರಣ

xr:d:DAGCRfdBZzY:2,j:3825106691698897923,t:24041305

ಅಂಕೋಲಾ, ಏಪ್ರಿಲ್‌ 13 : ಸಮುದ್ರ ಮತ್ತು ಹಳ್ಳದ ಸಂಗಮ ಪ್ರದೇಶದಲ್ಲಿ ನೀಲಿಕಲ್ಲು ( ಚಿಪ್ಪು ಮೀನು) ತೆಗೆಯಲು ಹೋಗಿದ್ದ ಶಾಲಾ ವಿದ್ಯಾರ್ಥಿನಿ (ಬಾಲಕಿ ) ಒರ್ವಳು ಆಕಸ್ಮಿಕವಾಗಿ ಮೃತ ಪಟ್ಟ ಘಟನೆ ತಾಲೂಕಿನ ಬೆಳಂಬಾರ ಮತ್ತು ನದಿಭಾಗ ಗಡಿಪ್ರದೇಶದಲ್ಲಿ ( ಹೊಸ ಕಿಂಡಿ ಅಣೆಕಟ್ಟು ) ಬಳಿ ಸಂಭವಿಸಿದೆ.
ಬೆಳಂಬಾರ ಮುಡ್ರಾಣಿ ನಿವಾಸಿ, ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ವಿಠ್ಠಲ ಗೌಡ (12) ಎಂಬಾಕೆಯೇ ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ. ಶಾಲೆಯ ರಜಾ ಅವಧಿ ಇರುವುದರಿಂದ ತನ್ನ ಸ್ನೇಹಿತೆಯರೊಂದಿಗೆ ನೀಲಿಕಲ್ಲು ತೆಗೆಯಲು ಅಳಿವೆಯಲ್ಲಿ ಇಳಿದಾಗ ಆಕಸ್ಮಿಕವಾಗಿ ಮೃತ ಪಟ್ಟಿದ್ದು, ಉಳಿದ ಇಬ್ಬರು ಬಾಲಕಿಯರನ್ನು ಸ್ಥಳೀಯರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ ಎನ್ನಲಾಗಿದೆ.

ಐಶ್ವರ್ಯ ಗೌಡಳ ತಂದೆ ವಿಠ್ಠಲ ಗೌಡ ಕಳೆದ ವರ್ಷ ಆಕಸ್ಮಿಕವಾಗಿ ಮೃತ ಪಟ್ಟಿದ್ದು, ಕಿವುಡುತನದ ಸಮಸ್ಯೆ ನಡುವೆಯೂ ಐಶ್ವರ್ಯಳ ತಾಯಿ, ತನ್ನ ಮಕ್ಕಳಿಗೆ ಕಷ್ಟಪಟ್ಟು ಓದಿಸುವ ಛಲದೊಂದಿಗೆ ಸಂಸಾರದ ಜವಾಬ್ದಾರಿ ಹೊತ್ತು ಸಾಗುತ್ತಿರುವಾಗ, ಮಗಳ ಆಕಸ್ಮಿಕ ಸಾವಿನ ಶೋಕದಿಂದ ತಾಯಿ ಕರಳು ನೊಂದು ಗೋಳಿಡುವಂತಾಗಿರುವುದು ಎಂಥವರ ಕರುಳು ಚುರ್ ಎನ್ನದೆ ಇರದು.

ಪಿ.ಎಸ್. ಐ ಜಯಶ್ರೀ ಪ್ರಭಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದೆ. ಘಟನೆಯ ಕುರಿತಂತೆ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಬೆಳಂಬಾರ ಗ್ರಾಮದ ಪ್ರಮುಖರಾದ ಮಾದೇವ ಗೌಡ, ಜಗದೀಶ ಖಾರ್ವಿ, ಶೇಖರ ಗೌಡ ಮತ್ತಿತರರಿದ್ದರು. ಶಾಲಾ ಶಿಕ್ಷಕರು ಸಹ ಭೇಟಿ ನೀಡಿ, ಘಟನೆ ಕುರಿತಂತೆ ಕಂಬನಿ ಮಿಡಿದು, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನೃತದೃಷ್ಟ ಈ ಬಡ ಕುಟುಂಬಕ್ಕೆ ಮಾನವೀಯ ನೆರವಿನ ಸಹಾಯ ಹಸ್ತ ಮತ್ತು ಸರ್ಕಾರದಿಂದ ಯೋಗ್ಯ ಪರಿಹಾರ ದೊರೆಯಬೇಕಿದೆ.