ಮೈಲುತುತ್ತ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರು: ಸಹಾಯ ಧನವಿಲ್ಲದೇ ಅಸಹಾಯಕವಾದ ಇಲಾಖೆ

ಶಿರಸಿ: ಅಡಿಕೆ ಬೆಳೆಗೆ ಕೊಳೆ ರೋಗ ಜಾಸ್ತಿ ಆಗುತ್ತಿದ್ದು, ಬೋರ್ಡೋ ತಯಾರಿಕೆಗೆ ಮೈಲುತುತ್ತದ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಿ ರೈತರು ಕಾಯುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರದಿಂದ ಸೂಕ್ತ ಸಹಾಯಧನ ಇಲ್ಲದೇ, ಇಲಾಖೆ ಅಸಹಾಯಕವಾಗಿದೆ.

ಯೋಜನೆ ಇದ್ದರೂ ಪ್ರಯೋಜನವಿಲ್ಲ.!

ಸಮಗ್ರ ತೋಟಗಾರಿಕಾ ಬೆಳೆಗಳ ಕೀಟ ಹಾಗೂ ರೋಗಗಳ ನಿಯಂತ್ರಣ ಯೋಜನೆಯಡಿ ಮೈಲುತುತ್ತಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಅಂತೂ ಈ ವರ್ಷ ಜಿಲ್ಲೆಗೆ 17.25 ಲಕ್ಷ ರೂ. ಮಂಜೂರಾಗಿದೆ. 469 ರೈತರು ಅರ್ಜಿ ಸಲ್ಲಿಸಿದ್ದು, ಈ ಅನುದಾನ ಯಾವುದಕ್ಕೂ ಸಾಲದಾಗಿದೆ. ಹೀಗಾಗಿ ಮೊದಲು ಅರ್ಜಿ ನೀಡಿದ ರೈತರಿಗೆ ಮಾತ್ರ ಸೌಲಭ್ಯ ದೊರೆಯುತ್ತದೆ. ಯಾವುದೇ ಒಂದು ಯೋಜನೆ ರೈತಸ್ನೇಹಿ ಆಗಬೇಕಾದರೆ ಫಲಾನುಭವಿ ರೈತರಿಗೆ ಪರಿಪೂರ್ಣವಾಗಿ ದೊರೆಯಬೇಕು. ಆದರೆ ಈ ರೀತಿ ಬಿಡಿಗಾಸು ಅನುದಾನ ಲಭ್ಯವಾದರೆ ಯೋಜನೆ ಇದ್ದು ಪ್ರಯೋಜನ ಇಲ್ಲವಾಗುತ್ತದೆ ಎಂದು ಅಡಿಕೆ ಬೆಳೆಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಷ್ಟು ಸಬ್ಸಿಡಿ ನೀಡಲಾಗುತ್ತೆ.?

ಯೋಜನೆಯ ಪ್ರಕಾರ ಮೈಲುತುತ್ತಕ್ಕೆ ಶೇ. 75 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಒಬ್ಬ ರೈತರಿಗೆ 1 ಹೆಕ್ಟೇರ್‌ವರೆಗೆ 10 ಕೆಜಿ ಮೈಲುತುತ್ತಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಪ್ರತಿ ಕೆಜಿ ಮೈಲುತುತ್ತಕ್ಕೆ 320 ರೂ. ಸಬ್ಸಿಡಿ ಸೌಲಭ್ಯ ದೊರೆಯುತ್ತದೆ. ಯೋಜನೆಯಡಿ ಸಬ್ಸಿಡಿ ನೀಡುವುದಕ್ಕೆ ಕನಿಷ್ಟ 60-70 ಲಕ್ಷ ರೂ. ಬೇಕಾಗುತ್ತದೆ. ಹಿಂದೆಲ್ಲ ತಾಲೂಕಿಗೆ 30 ಲಕ್ಷ ರೂ. ಅನುದಾನ ಸಿಗುತ್ತಿತ್ತು. ಆದರೆ ಈ ವರ್ಷ 3 ಲಕ್ಷಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಅಲ್ಪಸ್ವಲ್ಪ ಅನುದಾನ ಲಭ್ಯ ಆಗುತ್ತಿರುವುದರಿಂದ ಅರ್ಜಿ ಸಲ್ಲಿಸಿದ ಅದೆಷ್ಟೋ ರೈತರಿಗೆ ಸೌಲಭ್ಯ ಸಿಗುತ್ತಿಲ್ಲ. ಕೇವಲ ಅರ್ಜಿ ಸಲ್ಲಿಕೆಗೆ ಮಾತ್ರ ಸೀಮಿತವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 469 ಮಂದಿ ಅರ್ಜಿ ಸಲ್ಲಿಸಿದ್ದು ತೋಟಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿ ಆಯಾ ತಾಲೂಕುಗಳಿಗೆ 35 ಸಾವಿರದಿಂದ 3 ಲಕ್ಷ ರೂ. ವರೆಗೆ ಅನುದಾನ ನೀಡುವ ಗುರಿ ನಿಗದಿಪಡಿಸಲಾಗಿದೆ. ಅನುದಾನ ಕಡಿಮೆ ಇರುವುದರಿಂದ ಮೊದಲು ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ಇದು ಫಲಾನುಭವಿ ರೈತರಲ್ಲಿಅಸಮಾಧಾನವನ್ನು ಉಂಟುಮಾಡಿದೆ.

ಸಮಗ್ರ ತೋಟಗಾರಿಕಾ ಬೆಳೆಗಳ ಕೀಟ ಹಾಗೂ ರೋಗಗಳ ನಿಯಂತ್ರಣ ಯೋಜನೆಯಡಿ ಮೈಲುತುತ್ತ ಸಬ್ಸಿಡಿಗೆ ಜಿಲ್ಲೆಗೆ 17.25 ಲಕ್ಷ ರೂ. ಅನುದಾನ ಲಭ್ಯವಿದೆ. ಅದರಲ್ಲಿ ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಆದ್ಯತೆ ನೀಡಲಾಗುತ್ತದೆ.

– ಬಿ.ಪಿ.ಸತೀಶ, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ