ಕಾರವಾರ: ಬಾಲ ಕಾರ್ಮಿಕತೆ, ಮಾನವ ಕಳ್ಳ ಸಾಗಾಣಿಕೆ, ಮಕ್ಕಳ ದೌರ್ಜನ್ಯ ಸಾಮಾಜಿಕ ಪಿಡುಗಾಗಿದ್ದು, ಅವುಗಳನ್ನು ತೊಡೆದು ಹಾಕುವಲ್ಲಿ ಹಾಗೂ ಮಕ್ಕಳ ರಕ್ಷಣೆಯ ವಿಚಾರದಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ. ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಭಾಗೀದಾರರಿಗೆ ಹಮ್ಮಿಕೊಳ್ಳಲಾದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಂಪ್ರದಾಯದ ಹೆಸರಲ್ಲಿ ನಡೆಸಲಾಗುತ್ತಿರುವ ಶೋಷಣೆಯನ್ನು ತಡೆಗಟ್ಟು ಆಶಯದಿಂದ ಕಾನೂನಾತ್ಮಕವಾಗಿ ಮಾನವ ಕಳ್ಳಸಾಗಾಣಿಕೆ ತಡೆಗಟ್ಟಲು ಮಾನವ ಕಳ್ಳಸಾಗಾಣಿಕೆ ತಡೆಕಾಯ್ದೆ, ಮಕ್ಕಳ ರಕ್ಷಣೆಯ ಸಲುವಾಗಿ ಈ ಮಕ್ಕಳ ಹಕ್ಕುಗಳ ರಕ್ಷಣೆಯ ವಿವಿಧ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ನಿಮ್ಮ ಮಕ್ಕಳ ಭವಿಷ್ಯ, ರಕ್ಷಣೆಯ ವಿಚಾರದಲ್ಲಿ ಹೇಗೆ ಚಿಂತಿಸುತ್ತೀರೋ ಹಾಗೇ ಸಮಾಜದಲ್ಲಿ ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಭವಿಷ್ಯ, ರಕ್ಷಣೆ, ಹಕ್ಕುಗಳ ಕುರಿತು ಚಿಂತಿಸಬೇಕು. ಪ್ರತಿಯೊಬ್ಬ ಅಧಿಕಾರಿಯು ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಮಕ್ಕಳ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳಲು ಸಹಕರಿಸಬೇಕು. ಈ ಕಾಯ್ದೆಗಳ ಸಂಕ್ಷಿಪ್ತ ವಿವರ ಇರುವ ಪ್ರತಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯವರು ಮಾಡಬೇಕು. ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾದವರ, ಮಕ್ಕಳ ಧ್ವನಿಯಾಗಿ ನಾವೆಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸುವ ಮೂಲಕ ಸಮಾಜದ ಅಭ್ಯುದಯದಲ್ಲಿ ಸರ್ವರ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ತಿಳಿಸುವ ಕಾರ್ಯವಾಗಬೇಕು ಎಂದರು.
ಒತ್ತಡದ ನಡುವೆಯೂ ಪ್ರಾಮಾಣಿಕ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಮಾತನಾಡಿ, ಕೆಲಸದ ಒತ್ತಡದ ನಡುವೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಣೆಯನ್ನು ಪೊಲೀಸ್ ಇಲಾಖೆ, ಸಿಬ್ಬಂದಿಗಳು ಮಾಡುತ್ತಿದ್ದಾರೆ. ವಿವಿಧ ಸಹಾಯವಾಣಿ ಮೂಲಕ ಮಕ್ಕಳ, ಯುವಕ-ಯುವತಿಯರ, ವೃದ್ಧರರಕ್ಷಣೆಗೆ ಬೇಕಾದ ಅಗತ್ಯ ಕ್ರಮ ವಹಿಸಲಾಗುತ್ತಿದೆ. ನಗರ, ಗ್ರಾಮೀಣ ಪ್ರದೇಶದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅರಿವು ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂದು ಮಕ್ಕಳ ಸ್ನೇಹಿ ಪೊಲೀಸ್ ಪುಸ್ತಕ ಬಿಡುಗಡೆಗೊಳಿಸಿ ಅದನ್ನು ಎಲ್ಲ ಅಧಿಕಾರಿಗಳಿಗೂ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದೆ
ಜಿಲ್ಲಾ ಸತ್ರ ನ್ಯಾಯಾಧೀಶ ಡಿ. ಎಸ್. ವಿಜಯಕುಮಾರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯು ಉತ್ತಮವಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಲಿಂಗ ತಾರತಮ್ಯ ಅನುಸರಿಸದೇ ಸರ್ವರಿಗೂ ಒಂದೇ ರೀತಿಯ ಕಾನೂನು ಜಾರಿಯಲ್ಲಿದೆ. ಪೊಲೀಸ್ ಇಲಾಖೆಯು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಂವಿಧಾನ ನೀಡಿದ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಕ್ಕಳ ಹಕ್ಕುಗಳಿಗೆ, ರಕ್ಷಣೆಗೆ ಯಾವುದೇ ಅಡೆತಡೆಗಳಿಗೂ ಆಸ್ಪವಿಲ್ಲದಂತಾಗುತ್ತದೆ ಎಂದರು.
ರಾಜ್ಯ ಸರಕಾರವು 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿದ್ದು, ಮೂಲಭೂತ ಸೌಕರ್ಯಗಳ ಅವಶ್ಯಕತೆ ಇರುವವರಿಗೆ ಸೌಲಭ್ಯ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ಸರಕಾರ ದಕ್ಷತೆಯಿಂದ ಮಾಡುತ್ತಿದೆ. ಮಕ್ಕಳು ಬೌದ್ಧಿಕ, ಶಾರೀರಿಕ, ಶೈಕ್ಷಣಿಕ, ಮಾನಸಿಕವಾಗಿ ಸದೃಢರಾಗಿ ಬೆಳೆಯಲು ಅನುಕೂಲವಾಗುವಂತೆ ಹಾಗೂ ಅವರನ್ನು ರಕ್ಷಿಸುವ ಸಲುವಾಗಿ ಪೊಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಸದೃಢ ದೇಶಕಟ್ಟಲು ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು ಅವಶ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ., ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ದೇವಿದಾಸ ರಾಯ್ಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.