ಉತ್ತರಕನ್ನಡ: ಕಳೆದೆರಡು ತಿಂಗಳಿನಿಂದ ಜಿಲ್ಲೆಯಲ್ಲಿ ಅಬ್ಬರಿಸಿದ್ದ ವರುಣ ಇದೀಗ ಕೊಂಚ ಶಾಂತವಾಗಿದ್ದಾನೆ. ನೆರೆ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಜನತೆ ಇದೀಗ ಸಹಜ ಜೀವನದತ್ತ ಮರಳುತ್ತಿದೆ. ಆದ್ರೆ ಧಾರಾಕಾರವಾಗಿ ಸುರಿದ ಮಳೆ ಸಾಕಷ್ಟು ಕಡೆಗಳಲ್ಲಿ ಹಾನಿ ಉಂಟುಮಾಡಿದೆ. ಇದುವರೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಸುಮಾರು 400 ಕೋಟಿಗೂ ಅಧಿಕ ಹಾನಿ ಸಂಭವಿಸಿದ್ದಾಗಿ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಇದೀಗ ಹಾನಿ ಪರಿಶೀಲಿಸಿ ಪರಿಹಾರ ವಿತರಿಸುವ ಕಾರ್ಯಕ್ಕೆ ಮುಂದಾಗಿದೆ.
ಜಿಲ್ಲಾಡಳಿತದಿಂದ ಮಳೆಹಾನಿಯ ಸರ್ವೆ
ಉತ್ತರಕನ್ನಡದಲ್ಲಿ ಕಳೆದೆರಡು ತಿಂಗಳಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ಕೆಲವೆಡೆ ವರುಣ ಅಬ್ಬರಿಸಿದ್ದು ನೆರೆ ಪ್ರವಾಹಕ್ಕೆ ಕಾರಣವಾಗಿತ್ತು. ಅದರಲ್ಲೂ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದ ಧರೆ ಕುಸಿದು ಒಂದೇ ಕುಟುಂಬದ ನಾಲ್ವರು ದುರಂತ ಸಾವು ಕಂಡಿದ್ದರು. ನೂರಾರು ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟುಮಾಡಿತ್ತು. ಇದೀಗ ಮಳೆ ಕಡಿಮೆಯಾಗಿರುವ ಹಿನ್ನೆಲೆ ಜಿಲ್ಲಾಡಳಿತ ಪರಿಹಾರ ಕಾರ್ಯಕ್ಕೆ ಮುಂದಾಗಿದ್ದು ಹಾನಿಯ ಸರ್ವೆ ನಡೆಸುತ್ತಿದೆ.
ಹಾನಿಗೊಳಗಾದ ಮನೆಗಳೆಷ್ಟು.?
ಜಿಲ್ಲೆಯಲ್ಲಿ ಜೂನ್ 1 ರಿಂದ ಸುರಿದ ಮಳೆಯಿಂದಾಗಿ 451 ಮನೆಗಳಿಗೆ ಭಾಗಶಃ ಹಾನಿ ಸೇರಿದಂತೆ ಒಟ್ಟೂ 751 ಮನೆಗಳಿಗೆ ಹಾನಿಯುಂಟಾಗಿದೆ. ಮಳೆಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 95 ಸಾವಿರ ರೂ ಪರಿಹಾರವನ್ನ ನೀಡಲಾಗುತ್ತಿದ್ದು ಹೆಚ್ಚಿನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ 5 ಲಕ್ಷದ ವರೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂ ಪರಿಹಾರ ನಿಗದಿಪಡಿಸಿದ್ದು, ಈಗಾಗಲೇ 10 ಸಾವಿರ ರೂಪಾಯಿ ನೀಡಲಾಗಿದೆ. ಉಳಿದ 40 ಸಾವಿರ ರೂಪಾಯಿ ವಿತರಿಸುವ ಕಾರ್ಯ ಜಾರಿಯಲ್ಲಿದೆ. ಇನ್ನು ಅಗಸ್ಟ್ 1 ಹಾಗೂ 2 ರಂದು ಸುರಿದ ಮಳೆಗೆ ಭಟ್ಕಳವೊಂದರಲ್ಲೇ ಸುಮಾರು 3,890 ಮನೆಗಳಿಗೆ ನೀರು ನುಗ್ಗಿದ್ದು, ಜೂನ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟೂ 6,283 ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ನೀರು ನುಗ್ಗಿದ ಮನೆಗಳಿಗೂ ಸಹ 10 ಸಾವಿರ ರೂಪಾಯಿ ಪರಿಹಾರವನ್ನ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಹಾನಿಗೊಳಗಾದ ಗ್ರಾಮೀಣ ಹಾಗೂ ನಗರ ಪ್ರದೇಶದ ರಸ್ತೆಗಳು
ಇನ್ನು ಜಿಲ್ಲೆಯಲ್ಲಿ ಕಳೆದೆರಡು ತಿಂಗಳು ಸುರಿದ ಮಳೆಯಿಂದಾಗಿ 670 ಕಿಮೀ ಪಿಡಬ್ಲ್ಯೂಡಿ ರಸ್ತೆ ಹಾನಿಗೊಳಗಾಗಿದ್ದು ಗ್ರಾಮೀಣ ಪ್ರದೇಶದ 633 ಕಿಮೀ ರಸ್ತೆಗೆ ಹಾನಿಯುಂಟಾಗಿದೆ. ಇನ್ನು ಭಟ್ಕಳ ಪಟ್ಟಣದಲ್ಲಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿದ್ದರಿಂದಾಗಿ ನಗರ ಪ್ರದೇಶದಲ್ಲಿ ಸುಮಾರು 47 ಕಿಮೀ ರಸ್ತೆ ಹಾಳಾಗಿದ್ದು ಒಟ್ಟೂ ಜಿಲ್ಲೆಯಾದ್ಯಂತ ರಸ್ತೆಗಳಿಗೆ 55 ಕೋಟಿಯಷ್ಟು ಹಾನಿ ಸಂಭವಿಸಿದೆ.
ಮಳೆಯಿಂದ ಹಾನಿಗೊಳಗಾದ ಶಾಲೆಗಳು
ಇನ್ನು ಈ ಬಾರಿ ಶೈಕ್ಷಣಿಕ ಸಂಸ್ಥೆಗಳ ಹಾನಿ ಸರ್ವೆ ಮಾಡಿದ್ದು 476 ಶಾಲೆಗಳು ಹಾಗೂ 312 ಅಂಗನವಾಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇವುಗಳ ರಿಪೇರಿಗೆ ಇರುವ ಅನುದಾನದಲ್ಲಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ದಾಖಲೆ ಮಳೆ
ಇನ್ನು ಜಿಲ್ಲೆಯಲ್ಲಿ ಜೂನ್‌ನಿಂದ ಇಲ್ಲಿಯವರೆಗೆ 2042 ಮಿಮೀ ಮಳೆಯಾಗಿದ್ದು, ಭಟ್ಕಳ ತಾಲ್ಲೂಕೊಂದರಲ್ಲೇ ಅಗಸ್ಟ್ 2 ರಂದು ಬರೋಬ್ಬರಿ 533 ಮಿಮೀ ಮಳೆಯಾಗಿದ್ದು ಹಿಂದಿನ ಎಲ್ಲ ದಾಖಲೆಗಳಿಗಿಂತ ಅತ್ಯಧಿಕವಾಗಿದೆ. ಭಾರೀ ಮಳೆಯಿಂದ ಧರೆ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ ದುರ್ಘಟನೆ ನಡೆದ 24 ಗಂಟೆಗಳೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರೊಂದಿಗೆ ಆರ್ಥಿಕ ಸಹಾಯವನ್ನ ಒದಗಿಸಿದ್ದರು.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಅಧ್ಯಯನ
ಸದ್ಯ ಜಿಲ್ಲೆಯ ಕೆಲವೆಡೆ ಭೂಕುಸಿತ ಆತಂಕ ಎದುರಾಗಿದ್ದು ಕೇಂದ್ರದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧ್ಯಯನ ನಡೆಸುತ್ತಿದೆ. ಅದು ನೀಡುವ ವರದಿಯನ್ನಾಧರಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಸುರಿದ ಧಾರಾಕಾರ ಮಳೆಗೆ ಸದ್ಯದ ಅಂದಾಜಿನಂತೆ 437.83 ಕೋಟಿಯಷ್ಟು ಹಾನಿ ಸಂಭವಿಸಿದ್ದು ಇನ್ನೂ ಸಹ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಸದ್ಯ ವರುಣ ಬ್ರೇಕ್ ಕೊಟ್ಟಿದ್ದರಿಂದಾಗಿ ಜನರು ನಿಟ್ಟುಸಿರು ಬಿಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತೆ ಮಳೆ ಸುರಿದಲ್ಲಿ ಹಾನಿ ಹೆಚ್ಚಾಗುವ ಸಾಧ್ಯತೆಗಳಿವೆ.