ಉತ್ತರ ಕನ್ನಡ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲಾನ್ ಮಾಡ್ತಿದ್ದೀರಾ? ಹಾಗಾದರೆ ಈ ವಿಚಾರ ಗಮನಿಸಿ

ಕಳೆದ ಹದಿನೈದು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾದ ಹಿನ್ನೆಲೆ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಪ್ರವಾಸಗರ ಸಂಖ್ಯೆ ಇಳಿಕೆಯಾದ ಕಾರಣ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಜನರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿವೆ.

ಕಾರವಾರ, ಮಾರ್ಚ್ 21: ಜನ ಜಂಗುಳಿಯಿಂದ ಬಿಸಗುಡುತ್ತಿದ್ದ ತಾಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಲಿನ ಬೇಗೆಯ ಪರಿಣಾಮ ಈಗ ಮೌನವಾಗಿವೆ. ಸದಾ ಪ್ರವಾಸಿಗರಿಂದ ಬಿಸುಗುಡುತ್ತಿದ್ದ ಕಡಲ ತೀರಗಳು ಖಾಲಿ ಹೊಡೆಯುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಈಗ ಇಂಥ ದೃಶ್ಯ ಸಾಮಾನ್ಯ. ಕಳೆದ ಹದಿನೈದು ದಿನಗಳಿಂದ ರಾಜ್ಯದ ಕರಾವಳಿಯಲ್ಲಿ ಕೆಂಡದ ಭಾಸವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಂತೂ 42 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನ ದಾಖಲಾದ ಕಾರಣ ಜನರು ಹಗಲು ವೇಳೆ ಮನೆಯಿಂದ ಹೊರಬರುವುದನ್ನು ಆದಷ್ಟು ತಪ್ಪಿಸುವಂತೆ ಉತ್ತರ ಕನ್ನಡ ಜಿಲ್ಲಾಡಳಿತ ಮನವಿ ಮಾಡಿದೆ. ಹೀಗಾಗಿ ಸಹಜವಾಗಿಯೇ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹೇಳುವ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಪ್ರವಾಸಿಗರು ಭೇಟಿ ಕೊಡುವ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಆದರೆ, ಕಳೆದ ಹದಿನೈದು ದಿನಗಳಲ್ಲಿ, ಕಳೆದ ಆರು ತಿಂಗಳಿಗೆ ಹೊಲಿಕೆ ಮಾಡಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ 25 ರಷ್ಟು ಇಳಿಕೆ ಕಂಡುಬಂದಿದೆ.

2024 ರ ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಗುಡ್ಡ ಕುಸಿತ ಹಾಗೂ ಅತಿವೃಷ್ಟಿಯಿಂದ ಸೆಪ್ಟೆಂಬರ್ ವರೆಗೂ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆಯಲ್ಲಿ ಏರಿಕೆ ಕಂಡಿರಲಿಲ್ಲ. ಬೆಸಿಗೆಯಲ್ಲಾದರೂ ಹೆಚ್ಚಿನ ಪ್ರವಾಸಿಗರು ಜಿಲ್ಲೆಗೆ ಭೇಟಿ ಕೊಡಬಹುದು ಎಂಬ ನೀರಿಕ್ಷೆ ಇತ್ತು. ಆದರೆ, ಮಾರ್ಚ್ ಆರಂಭದಲ್ಲೇ ಉಷ್ಣತೆ 42 ಡಿಗ್ರಿ ಸೆಲ್ಸಿಯಸ್ ಗಡಿ ದಾಟುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಪ್ರವಾಸಿ ತಾಣ ನಂಬಿ ಜೀವನ ನಡೆಸುವ ಕುಟುಂಬಗಳು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.