​​​ನನ್ನ ಮೇಲೆ ಹನಿಟ್ರ್ಯಾಪ್ ಯತ್ನ: ಸದನದಲ್ಲೇ ಬಹಿರಂಗಪಡಿಸಿದ ಸಚಿವ ರಾಜಣ್ಣ

ಬೆಂಗಳೂರು, (ಮಾರ್ಚ್​ 20): ಕರ್ನಾಟಕದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್​  ಬಲೆಗೆ ಬೀಳಿಸುವ ಯತ್ನ ನಡೆದಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿತ್ತು. ಆದ್ರೆ ಆ ಸಚಿವರು ಯಾರು? ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಯತ್ನ ಮಾಡಿದ್ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು. ಆದ್ರೆ, ಇದೀಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಸಹಕಾರ ಸಚಿವ ಕೆಎನ್​ ರಾಜಣ್ಣ ಅವರನ್ನೇ ಹನಿಟ್ರ್ಯಾಪ್​ ಬಲೆ ಕೆಡವಲು ಯತ್ನ ನಡೆದಿದೆ ಎನ್ನುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ರಾಜಣ್ಣ ಅವರೇ  ಇಂದು(ಮಾರ್ಚ್ 20)  ಸದನದಲ್ಲಿ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ಮೂಲಕ ರಾಜಣ್ಣ ಅವರು ಕಳೆದ ಹಲವು ದಿನಗಳಿಂದ ಹನಿಟ್ರ್ಯಾಪ್ ಬಗ್ಗೆ ನಡೆಯುತ್ತಿದ್ದ ಗುಸುಗುಸು ಚರ್ಚೆಗೆ ಸ್ಪಷ್ಟನೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ರಾಜ್ಯದಲ್ಲಿ ಹನಿ ಟ್ರ್ಯಾಪ್‌ ಬಗ್ಗೆ ಕೇಳಿ ಬರುತ್ತಿದ್ದ ಗುಸು, ಗುಸು ಬಗ್ಗೆ ಸದನದಲ್ಲಿ ಮೊದಲಿಗೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಕಾರ್ಕಳ ಅವರು ಪ್ರಸ್ತಾಪಿಸಿದ್ದರು. ಇದರ ಬೆನ್ನಲ್ಲೇ ಇಂದು ವಿಧಾನಸಭೆಯಲ್ಲಿ ಗಹನವಾದ ಚರ್ಚೆ ನಡೆದಿದೆ. ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹನಿಟ್ರ್ಯಾಪ್‌ ವಿಚಾರವನ್ನು ಪ್ರಸ್ತಾಪ ಮಾಡಿದರು. ನೇರವಾಗಿ ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಬಹಿರಂಗವಾಗಿಯೇ ಹೇಳಿದರು.

ಇನ್ನು ಶಾಸಕ ಯತ್ನಾಳ್ ಅವರ ಮಾತಿಗೆ ಖುದ್ದು ಸಚಿವ ಕೆ.ಎನ್ ರಾಜಣ್ಣ ಎದ್ದು ನಿಂತು ಪ್ರತಿಕ್ರಿಯಿಸಿದ್ದು, ಯತ್ನಾಳ್ ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ನಾನು ವಾಸ್ತವವನ್ನು ಹೇಳುತ್ತೇನೆ. ಸಾರ್ವಜನಿಕವಾಗಿ ತಪ್ಪು ಮಾಹಿತಿ ಹೋಗಬಾರದು ಎಂದು ಹೇಳುತ್ತಿದ್ದೇನೆ. ತುಮಕೂರು ಭಾಗದ ಸಚಿವ ಎಂದು ಹೇಳುತ್ತಿದ್ದು, ನಾನು ಮತ್ತು ಪರಮೇಶ್ವರ್ ಇಬ್ಬರೇ ಇರುವುದು. ಕರ್ನಾಟಕ ರಾಜ್ಯ ಸಿಡಿಗೆ ಕಾರ್ಖಾನೆ ಎಂದು ಬಹಳ ಜನ ಹೇಳುತ್ತಾರೆ. ಇದು ಕೇವಲ ಇಲ್ಲಿಗೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ನಾಯಕರ ಹನಿಟ್ರ್ಯಾಪ್ ಆಗಿದೆ. ನಾನು ಲಿಖಿತ ರೂಪದಲ್ಲಿ ದೂರು ಕೊಡುತ್ತೇನೆ. ಅದನ್ನ ಆಧರಿಸಿ ತನಿಖೆ ನಡೆಸಬೇಕು. ಸುಮಾರು 48 ರಾಜ್ಯ, ರಾಷ್ಟ್ರಮಟ್ಟದ ನಾಯಕರ ಹನಿಟ್ರ್ಯಾಪ್ ವಿಡಿಯೋಗಳಿವೆ ಎನ್ನುವ ಸ್ಫೋಟಕ ವಿಚಾರವನ್ನು ಸದನದಲ್ಲಿ ತಿಳಿಸಿದರು.