
ಹುಬ್ಬಳ್ಳಿ, ಹಾವೇರಿ, ಜನವರಿ 22: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನೂ ಮೃತಪಟ್ಟಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಜಿಲ್ಲೆ ಸವಣೂರಿನ ಅಸ್ಲಂ ಬಾಬುಲಿ ಬೆಣ್ಣಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರ ಸಂಬಂಧಿ ದಾದಾಪೀರ ಮಾಧ್ಯಮದ ಮುಂದೆ ನೋವು ತೋಡಿಕೊಂಡು ಕಣ್ಣೀರು ಹಾಕಿದ್ದಾರೆ.
ಘಟನೆ ಬಗ್ಗೆ ಸವಣೂರ ನಿವಾಸಿ ಇಮ್ರಾನ್ ಮಾಧ್ಯಮದ ಜತೆ ಮಾತನಾಡಿ, ‘ನಮಗೆ ಇನ್ನು ಮುಂದೆ ಸಂತೆಗೆ ಹೋಗಬಾರದು ಅನಿಸುತ್ತಿದೆ. ನಮ್ಮ ಮನೆಲಿ ಸಂತೆ ಅಂದ್ರೆ ತಗೊಂಡು ಹೊಡೆಯುತ್ತಾರೆ’ ಎಂದಿದ್ದಾರೆ. ನಾವು ಕೂಡ ಪ್ರತಿ ವಾರ ಸಂತೆಗೆ ಹೋಗುತ್ತಿದ್ದೆವು. ಆದರೆ, ಇವತ್ತು ತರಕಾರಿ ಇರದ ಕಾರಣಕ್ಕೆ ಹೋಗಿಲ್ಲ. ಇಂಥ ದುರ್ಘಟನೆ ಸಂಭವಿಸಬಾರದಿತ್ತು ಎಂದಿದ್ದಾರೆ.
ಏತನ್ಮಧ್ಯೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಿಂದೇಟು ಹಾಕಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ್ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಬೆಳಗಿನ ಜಾವ 6:30ಕ್ಕೆ ಯಲ್ಲಾಪುರ ಹತ್ತಿರ ಅವಘಡ ಸಂಭವಿಸಿದೆ. 26 ಕೂಲಿ ಕಾರ್ಮಿಕರು ಅಪಘಾತಕ್ಕಿಡಾಗಿದ್ದಾರೆ. ನಮ್ಮಲ್ಲಿ 11 ಜನ ಬಂದಿದ್ದರು, ಅದರಲ್ಲಿ ಒಬ್ಬ ಸ್ಥಳದಲ್ಲೇ ತೀರಿಹೋಗಿದ್ದರು. ಗಾಯಾಳುಗಳಿಗೆ ಬೇಕಾದ ಚಿಕಿತ್ಸೆ ಈಗಾಗಲೇ ನೀಡಲಾಗಿದೆ. ಡಾ.ರಾಜಶೇಖರ್ ನೇತೃತ್ವದ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಗಾಯಾಳುಗಳನ್ನ ಈಗ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದಿಂದ ಸೂಕ್ತ ಪರಿಹಾರ: ಸಿಎಂ ಭರವಸೆ
ಗುಳ್ಳಾಪುರ ಹಾಗೂ ರಾಯಚೂರಿನ ಸಿಂಧನೂರು ಅಪಘಾತಗಳಲ್ಲಿ 14 ಜನ ಮೃತಪಟ್ಟಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ಟ್ವೀಟ್ ಮೂಲಕ ಸಂದೇಶ ಪ್ರಕಟಿಸಿರುವ ಅವರು, ಮೃತರ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರದ ಭರವಸೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.