ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ವಿಶಿಷ್ಟವಾಗಿ ನಡೆದ ಸ್ವಾತಂತ್ರ್ಯೋತ್ಸವ

ಕುಮಟಾ: ತಾಲೂಕಿನ ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ ನೆರವೇರಿಸಿದರು.

ಭಾರತದ ಸ್ವಾತಂತ್ರ್ಯ ದಿನವು ಪ್ರತಿಯೊಬ್ಬ ಪ್ರಜೆಗೂ ಮಹತ್ವದ ದಿನವಾಗಿದೆ. ಭಾರತದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ನಾವು ಮೊದಲು ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಎಲ್ಲವನ್ನೂ ಪಣಕ್ಕಿಟ್ಟ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಿಗೆ ನಮಸ್ಕರಿಸಬೇಕಾಗಿದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ.

ಪರಮಾಣು ಸಾಮರ್ಥ್ಯದ ದೇಶವಾಗಿರುವ ಭಾರತ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ಚಂದ್ರಯಾನ-2 ರ ಯಶಸ್ಸು ಇದಕ್ಕೆ ದೊಡ್ಡ ನಿದರ್ಶನ. ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಸಾಕಷ್ಟು ಮುನ್ನೆಡೆ ಸಾಧಿಸಿದೆ. ಅಪರಾಧ, ಭ್ರಷ್ಟಾಚಾರ, ಹಿಂಸೆ, ನಕ್ಸಲಿಸಂ, ಭಯೋತ್ಪಾದನೆ, ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ ಎಂಬುದಂತೂ ಅಕ್ಷರಶಃ ಸತ್ಯ. ನಾವೆಲ್ಲರೂ ಒಗ್ಗಟ್ಟಾಗಿ ಈ ಸಮಸ್ಯೆಗಳನ್ನು ಕೊನೆಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಪತ್ರಕರ್ತ ಸುಭಾಶ್ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿ.ಎನ್.ಹೆಗಡೆ ಟ್ರಸ್ಟ್ ಪ್ರಾಯೋಕತ್ವದಲ್ಲಿ ವಿಜಯವಾಣಿ ಪತ್ರಿಕೆಯ ವತಿಯಿಂದ ಏರ್ಪಡಿಸಿದ್ದ ತಾಲೂಕಾ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆಯ ವಿಜೇತರನ್ನು ಘೋಷಿಸಿ, ಬಹುಮಾನವನ್ನು ವಿತರಿಸಿದರು.

ಹನುಮಂತ ಬೆಣ್ಣೆ ಸರ್ಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿ ಪಟಗಾರ(ಪ್ರಥಮ), ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಶಾನಭಾಗ್(ದ್ವಿತೀಯ)ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಅವಧಾನಿ(ತೃತೀಯ) ಸ್ಥಾನಗಳನ್ನು ಪಡೆದಿದ್ದಾರೆ.

ಪ್ರಥಮ ಪಿಯು ವಿಜ್ಞಾನ ವಿಭಾಗದ ಪೃಥ್ವಿ ಹೆಗಡೆ ಮತ್ತು ಬಳಗದವರು, ದ್ವಿತೀಯ ಪಿಯು ವಾಣಿಜ್ಯ-ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಂದ ರಾಷ್ಟ್ರಪ್ರೇಮದ ಗೀತಗಾಯನಗಳು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.
ಕೆನರಾ ಹೆಲ್ತ್ ಕೇರ್ ಸೆಂಟರ್ ವೈದ್ಯರಾದ ಡಾ.ಸಚಿನ್ ನಾಯಕ್, ಡಾ.ಪ್ರಕಾಶ್ ಭಟ್, ಶಿಕ್ಷಣ ಪ್ರೇಮಿಗಳಾದ ಚೈತ್ರಾ ಹೆಗಡೆ, ಸಂಜಯ್, ಸಂಕಲ್ಪ, ವರದಿಗಾರ ಶಂಕರ ಶರ್ಮ, ಸಂಸ್ಥೆಯ ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.