ಭೀಮ್‌ಕೋಲ್ ಕೆರೆ ದಡದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಕಾರವಾರ: ತಾಲೂಕಿನ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಟೆಗಾಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಮೃತ ಸರೋವರ ಅಭಿಯಾನದ ಅಂಗವಾಗಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನೆರವೇರಿತು. ಭೀಮ್‌ಕೋಲ್ ಕೆರೆಯ ದಂಡೆಯ ಮೇಲೆ ಸೋಮವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಕೇಂದ್ರ ಸರಕಾರದ ಆದೇಶದಂತೆ ಗ್ರಾಮದ ಹಿರಿಯ ನಾಗರಿಕರಾದ ಶಾಂತಾರಾಮ್ ಥಾಮಸೆ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಾಲಪ್ಪನವರ ಆನಂದಕುಮಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನಲೆ ದೇಶದಾದ್ಯಂತ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಅಲ್ಲದೇ ಕೇಂದ್ರ ಸರಕಾರ ಅಮೃತ ಸರೋವರ ಅಭಿಯಾನ ಹಮ್ಮಿಕೊಂಡಿದ್ದು, ಇದೆಲ್ಲದರ ಪ್ರಯುಕ್ತ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭೀಮ್‌ಕೋಲ್ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಭಿವೃದ್ಧಿ ಕಾಮಗಾರಿಯಲ್ಲಿ ತಾಲೂಕು, ಗ್ರಾಮ ಪಂಚಾಯತಿ ಹಾಗೂ ನರೇಗಾ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ಭೀಮ್‌ಕೋಲ್ ಕೆರೆ ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲದೇ ಬೇರೆ ಬೇರೆ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿರುವ ಅತ್ಯಂತ ಸುಂದರ ಪ್ರೇಕ್ಷಣಿಯ ಸ್ಥಳಕ್ಕೆ ಪ್ರಾವಾಸಿಗರು ಬರುತ್ತಿರುವುದು ಸಂತಸದ ವಿಷಯವಾಗಿದೆ. ಆದ್ದರಿಂದ ಕೆರೆಯ ಸ್ವಚ್ಚತೆ ಹಾಗೂ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಬೇಕಿದೆ. ಹೀಗಾಗಿ ಸ್ಥಳಿಯ ಜನಪ್ರತಿನಿಧಿಗಳು, ಸಾರ್ವಜನಿಕರು, ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವಚ್ಚತೆ ಹಾಗೂ ಭದ್ರತೆಯ ಜೊತೆಗೆ ಪ್ರಾಕೃತಿಕ ಸೌಂದರ್ಯ ಕಾಪಾಡಿಕೊಳ್ಳಬೇಕಿದೆ ಎಂದರು.

ನಂತರದಲ್ಲಿ ಶಾಲಾ ಮಕ್ಕಳು ದೇಶಭಕ್ತಿ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇಶಾಭಿಮಾನ ವ್ಯಕ್ತಪಡಿಸಿದರು.

ಈ ವೇಳೆ ಹಣಕೋಣ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಂಜನಾ ಪವಾರ, ಉಪಾಧ್ಯಕ್ಷರಾದ ಶ್ರದ್ಧಾ ನಾಯ್ಕ್, ತಾಪಂ ವ್ಯವಸ್ಥಾಪಕರಾದ ಅನಿತಾ ಎನ್. ಬಂಡಿಕಟ್ಟೆ, ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ್ ನಾಯ್ಕ್, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.