ವಿರುದುನಗರ: ತಮಿಳುನಾಡಿನ ವಿರುದುನಗರದಲ್ಲಿ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ವಿರುದುನಗರದಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಇಂದು ಸಂಭವಿಸಿದ ಸ್ಫೋಟದಲ್ಲಿ 6 ಕಾರ್ಮಿಕರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ರಾಸಾಯನಿಕಗಳನ್ನು ಬೆರೆಸುವ ಪ್ರಕ್ರಿಯೆಯ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಸ್ಫೋಟದ ಪರಿಣಾಮದಿಂದ ಕನಿಷ್ಠ 4 ಕೊಠಡಿಗಳು ನೆಲಸಮವಾಗಿದೆ. ಇದರಿಂದ ಹಲವು ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಶನಿವಾರ) ಮುಂಜಾನೆ ವಿರುದುನಗರ ಜಿಲ್ಲೆಯ ಸತ್ತೂರ್ ಪ್ರದೇಶದಲ್ಲಿ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಈ ಘಟನೆ ನಡೆದಿದೆ. ಅಧಿಕಾರಿಗಳ ಮಾಹಿತಿ ಮೇರೆಗೆ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸ್ಥಳಕ್ಕೆ ಧಾವಿಸಿದೆ. ಸ್ಫೋಟದ ಕಾರಣ ಮತ್ತು ಹಾನಿಯ ಪ್ರಮಾಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿದೆ. ಕಳೆದ ವರ್ಷ ವಿರುಧನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರೀ ಸ್ಫೋಟದ ನಂತರ 9 ಜನರು ಸಾವನ್ನಪ್ಪಿದ್ದರು ಮತ್ತು ಮೂವರ ಸ್ಥಿತಿ ಗಂಭೀರವಾಗಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತ್ತು. 9 ಜನರು ಸಾವನ್ನಪ್ಪಿದ್ದರು ಮತ್ತು ಮೂವರ ಸ್ಥಿತಿ ಚಿಂತಾಜನಕವಾಗಿತ್ತು. ಗಾಯಾಳುಗಳನ್ನು ಶಿವಕಾಶಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.