ಬಸ್ ಟಿಕೆಟ್ ದರ ಏರಿಕೆ – ಪ್ರಯಾಣಿಕರಿಗೆ ಗುಲಾಬಿ ಕೊಟ್ಟು ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ

ಬೆಂಗಳೂರು: ನಾಲ್ಕು ನಿಗಮಗಳ ಪ್ರಯಾಣ ದರ ಏರಿಕೆ ಖಂಡಿಸಿ, ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಬಡವರಿಗೆ ಬಿಜೆಪಿ ಫ್ರೀ ಕೊಟ್ಟಿರಲಿಲ್ಲ. ಕಾಂಗ್ರೆಸ್ ಫ್ರೀ ಕೊಟ್ಟು ದರ ಏರಿಕೆ ಮಾಡಿದೆ. ಹಾಲಿನಲ್ಲಿ ಕಲ್ಲು ಹಾಕಿದ ದುರುಳರು ಇವರು. ಮದ್ಯದ ದರವೂ ಏರಿಕೆ ಮಾಡಿದ್ದೀರಿ. ವಿದ್ಯುತ್, ನೋಂದಣಿ ದರವೂ ಏರಿಕೆ ಮಾಡಿದ್ದೀರಿ. ಈ ಸರ್ಕಾರ ಎಲ್ಲದಕ್ಕೂ ಟ್ಯಾಕ್ಸ್ ಹಾಕಿದೆ. ಬಸ್ ದರ ಏರಿಕೆ ಮೂಲಕ ಬಡ ಜನರಿಗೆ ಸಿಎಂ ಒಳ್ಳೆದು ಮಾಡಿದ್ದಾರೆ. ನಾವು ಪ್ರಯಾಣಿಕರಿಗೆ ಗುಲಾಬಿ ಕೊಡುತ್ತೇವೆ. ನಮ್ಮನ್ನು ಕ್ಷಮಿಸಿ ಬಿಡಿ ಎಂದು ಗುಲಾಬಿ ಕೊಡುತ್ತೇವೆ. ಕಂದಾಯ, ಮನೆ ಬಾಡಿಗೆ ಎಲ್ಲವೂ ದರ ಏರಿಕೆಯಾಗಿದೆ. ನಾನು ಸಾರಿಗೆ ಸಚಿವ ಇದ್ದಾಗ 1 ಸಾವಿರ ಕೋಟಿ ಲಾಭ ಇತ್ತು ಎಂದು ವಾಗ್ದಾಳಿ ನಡೆಸಿದರು. 

ಇನ್ನು ಇದೇ ವೇಳೆ ಪ್ರಯಾಣಿಕರಿಗೆ ಹೂ ಕೊಡಲು ಹೋದಾಗ ಅಶೋಕ್ ಅವರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಅಶೋಕ್ ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪೊಲೀಸ್ ದೌರ್ಜನ್ಯ ಬೇಡ. ರೈಟಿಂಗ್‌ನಲ್ಲಿ ಪ್ರತಿಭಟನೆ ಮಾಡಬಾರದು ಎಂದು ಕೊಡಿ. ಸರ್ಕಾರ ಇದೇ ಇರೋದಿಲ್ಲ. ನಾಟಕ ಆಡುತ್ತಿದ್ದೀರಾ ನೀವು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಅಶೋಕ್ ಜೊತೆ ಬಿಜೆಪಿ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.