ನಾಳೆ ಶನಿವಾರ ಒಂದು ದಿನ ಕಳೆದರೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಗಂಡಸರ ಜೇಬಿಗೆ ಕತ್ತರಿ ಬೀಳಲಿದೆ. ಭಾನುವಾರ ಬೆಳಗ್ಗೆಯಿಂದಲೇ ಅಂದರೆ ಜನವರಿ 5ರಿಂದ KSRTC ಟಿಕೆಟ್ ದರ ಹೆಚ್ಚಳ ರಾಜ್ಯಾದ್ಯಂತ ಜಾರಿಗೆ ಬರುತ್ತಿದೆ. ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಹಾಗಾದ್ರೆ, ನಿಮ್ಮ ಊರಿನ ಟಿಕೆಟ್ ರೇಟ್ ಎಷ್ಟು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಜನವರಿ 03): ಕರ್ನಾಟಕ ನಾಲ್ಕು ನಿಗಮಗಳ ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಏರಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾಲು ಸಾಲು ಬೆಲೆ ಏರಿಕೆಯಿಂದ ತತ್ತರಿಸಿರೋ ಜನರಿಗೆ ಇದೀಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆನೋ ಫ್ರೀ ಇದೆ. ಒಂದು ಕೊಟ್ಟು ಮತ್ತೊಂದು ಕಸಿದುಕೊಂಡಿದ್ದಾರೆ ಎನ್ನುವುದು ಜನರ ಮಾತು. ಇದನ್ನೇ ಅಸ್ತ್ರ ಮಾಡ್ಕೊಂಡ ಬಿಜೆಪಿ, ಇವತ್ತು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡಿದೆ. ಇನ್ನು ಈ ಬಗ್ಗೆ ಖುದ್ದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ಸಮಜಾಯಿಷಿ ನೀಡಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗರೆಡ್ಡಿ ನಾಲ್ಕೂ ಸಾರಿಗೆ ನಿಗಮಗಳು ದರ ಪರಿಷ್ಕರಣೆ ಕೇಳುತ್ತಿದ್ದರು. ಆದ್ರೆ, ಸಮಯ ಕೂಡಿ ಬಂದಿರಲಿಲ್ಲ. ಬಿ ಎಂಟಿಸಿಯಲ್ಲಿ 2014 ರಲ್ಲಿ ದರ ಪರಿಷ್ಕರಣೆ ಮಾಡಿದ್ವಿ. ಡೀಸೆಲ್ ದರ ಕಡಿಮೆಯಾದಾಗ ಟಿಕೇಟ್ ದರ ಕಡಿಮೆ ಮಾಡಿದ್ಚಿ 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ದರ ಪರಿಷ್ಕರಣೆ ಆಗಿರಲಿಲ್ಲ. ಇಂಧನದರ ಉಪಕರಣ ದರ ಈಗಿನಷ್ಟು ಇರಲಿಲ್ಲ, ಶೇ 12ರಷ್ಟು ದರ ಕೆಎಸ್ಆರ್ಟಿಸಿಯವರು 2020 ರಲ್ಲಿ ಹೆಚ್ಚಳ ಮಾಡಿದ್ರು, ಡೀಲ್ಗೆ ಆಗ 9.16 ಕೋಟಿ ರೂ. ಖರ್ಚಾಗುತ್ತಿತ್ತು. ಈಗ ಪ್ರತಿದಿನ 13.21 ಕೋಟಿ ಡೀಸೆಲ್ ದರ ವೆಚ್ಚವಿದೆ. ಡೀಸೆಲ್ ಗೆ ಪ್ರತಿದಿನ 4.05 ಕೋಟಿ ರೂ. ಖರ್ಚು ಹೆಚ್ಚಾಗಿದೆ. ಸಿಬ್ಬಂದಿ ವೆಚ್ಚ ಪ್ರತಿದಿನ 5.51 ಕೋಟಿ ಹೆಚ್ಚಳವಾಗಿದೆ. ಪ್ರತಿದಿನ ಒಟ್ಟು 9.56 ಕೋಟಿ ರೂ. ವೆಚ್ಚ ಹೆಚ್ಚಾಗಿದೆ. ಸರ್ಕಾರ ನಮಗೆ 8800 ಕೋಟಿ ರೂ. ನಮಗೆ ಶಕ್ತಿ ಯೋಜನೆಯಡಿ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗರೆಡ್ಡಿ, ರಾಜ್ಯ ಸರ್ಕಾರಕ್ಕೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಕ್ಕೆ ಇಷ್ಟ ಇರಲಿಲ್ಲ. ಪ್ರತಿನಿತ್ಯ ವೆಚ್ಚ ಜಾಸ್ತಿ ಆಗುತ್ತಾ ಇತ್ತು. ಇಷ್ಟ ಕಷ್ಟದಲ್ಲಿ ಹೊಸ ಬಸ್ ಕೊಟ್ಟಿದ್ದೀವಿ. 1000 ನೇಮಕಾತಿ ಮಾಡಿದ್ದೀವಿ. ಹೊಸ ನಿಯಮಗಳನ್ನು ಆರೋಗ್ಯ ವಿಮೆ ಮಾಡುತ್ತಾ ಇದ್ದೀವಿ. ಬಿಜೆಪಿಯವರು ಸಾಲ ಮಾಡಿ ಬಿಟ್ಟು ಹೋಗಿದ್ದರು. ಬಿಜೆಪಿ ಮಹಿಳಾ ವಿರೋಧಿಗಳು. ಶಕ್ತಿ ಯೋಜನೆ ನಿಲ್ಲಿಸಬೇಕು ಎಂದು ಅಪಪ್ರಚಾರ ಮಾಡುತ್ತಾ ಇದ್ದಾರೆ. ನಾವು 2028ರಲ್ಲಿ ಮತ್ತೆ ನಮ್ಮ ಸರ್ಕಾರ ಬರುತ್ತೆ. 2030ರವರೆಗೆ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತೆ ಎಂದು ಹೇಳಿದರು.