ನವದೆಹಲಿ: ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ದಟ್ಟ ಮಂಜು ಆವರಿಸಿದ್ದು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಅಲ್ಲದೇ ಕಡಿಮೆ ಗೋಚರತೆಯಿಂದಾಗಿ 100ಕ್ಕೂ ಅಧಿಕ ವಿಮಾನಗಳಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
ದಟ್ಟ ಮಂಜಿನಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಸಂಭವಿಸಿದೆ. CAT-III ಸಾಮರ್ಥ್ಯದ ವಿಮಾನಗಳು ಮಾತ್ರ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗುತ್ತಿವೆ. ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ ಬಗ್ಗೆ ತಿಳಿದುಕೊಂಡು ಏರ್‌ಪೋರ್ಟ್‌ಗೆ ಹೋಗಿ ಎಂದು ಇಂಡಿಗೊ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಇನ್ನೂ Flightradar.com ಮಾಹಿತಿ ಪ್ರಕಾರ 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯಲ್ಲಿ ಏರುಪೇರಾಗಿದೆ. ಈ ನಡುವೆ ವಿಮಾನಗಳ ಕಾರ್ಯಾಚರಣೆ ಬಗ್ಗೆ ವಿಮಾನಯಾನ ಕಂಪನಿಗಳ ಜೊತೆ ಸಂಪರ್ಕದಲ್ಲಿರಿ ಎಂದಿರುವ ದೆಹಲಿ ವಿಮಾನ ನಿಲ್ದಾಣವು, ಉಂಟಾದ ಸಮಸ್ಯೆಗೆ ಪ್ರಯಾಣಿಕರ ಕ್ಷಮೆ ಕೋರಿದೆ.