IND vs ENG: ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾದ ಐವರು ಸ್ಟಾರ್ ಆಟಗಾರರು

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಫೆಬ್ರವರಿ 6 ರಿಂದ ಆರಂಭವಾಗಲಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಯಾರಿಗೆ ಇದು ಕೊನೆಯ ಅವಕಾಶವಾಗಿದ್ದು, ಈ ಸರಣಿಯಲ್ಲಿನ ಪ್ರದರ್ಶನದ ಆಧಾರದ ಮೇಲೆ ಮಾತ್ರ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಐವರು ಸ್ಟಾರ್ ಆಟಗಾರರಿಗೆ ತಮ್ಮ ಶಕ್ತಿ ಪ್ರದರ್ಶಿಸಲು ಅವಕಾಶ ಸಿಗುವುದಿಲ್ಲ.

ಚಾಂಪಿಯನ್ಸ್ ಟ್ರೋಫಿ ಆರಂಭವಾಗಲು ಸುಮಾರು ಒಂದು ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನ ಭಾರತ ತಂಡಕ್ಕೆ ಸಿದ್ಧಗೊಳ್ಳಲು ಒಂದೇ ಒಂದು ಅವಕಾಶವಿದ್ದು ಅದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಾಗಿದೆ. ಈ ಸರಣಿಯಲ್ಲಿ ಅವಕಾಶ ಪಡೆಯುವ ಆಟಗಾರರು ಚಾಂಪಿಯನ್ಸ್ ಟ್ರೋಫಿಗೂ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಆದರೆ ಈ ಸರಣಿಯಲ್ಲಿ ತಂಡದ ಐವರು 5 ಸ್ಟಾರ್ ಆಟಗಾರರಿಗೆ ಈಗಾಗಲೇ ಗೇಟ್​ಪಾಸ್ ನೀಡಲಾಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದು ಫೆಬ್ರವರಿ 6 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಪಂದ್ಯ ಫೆಬ್ರವರಿ 12 ರಂದು ನಡೆಯಲಿದೆ. ಆದರೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಂಚಲನ ಮೂಡಿಸಿದ್ದ ಜಸ್ಪ್ರೀತ್ ಬುಮ್ರಾ ಈ ಸರಣಿಯಿಂದ ಹೊರಗುಳಿಯಲಿದ್ದಾರೆ. ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು. ಈ ಕಾರಣದಿಂದ ಸದ್ಯಕ್ಕೆ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ.

ಬುಮ್ರಾ ಹೊರತುಪಡಿಸಿ, ಸುದೀರ್ಘ ಟೆಸ್ಟ್ ಸರಣಿಯ ನಂತರ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಅವರು ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈಗ ಅವರನ್ನು ನೇರವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಬಹುದು. ಇದು ಗಾಯಗೊಂಡು ದಣಿದ ಆಟಗಾರರ ವಿಚಾರ. ಈ ಇಬ್ಬರಲ್ಲದೆ ಸಂಪೂರ್ಣ ಫಿಟ್ ಮತ್ತು ಫ್ರೆಶ್ ಆಗಿರುವ 3 ಆಟಗಾರರಿಗೂ ಈ ಸರಣಿಯಲ್ಲಿ ಆಡುವ ಅವಕಾಶ ಸಿಗುವುದಿಲ್ಲ.

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಪಡೆಯುವ ಭರವಸೆ ಇಲ್ಲ. ಇದರ ಹಿಂದಿನ ದೊಡ್ಡ ಕಾರಣ ಅವರ ಪ್ರದರ್ಶನ. 2023ರ ಏಕದಿನ ವಿಶ್ವಕಪ್‌ವರೆಗೆ ಅವರು ಭಾರತದ ತಂಡದ ಪ್ರಮುಖ ಭಾಗವಾಗಿದ್ದರು. ಆದರೆ ವಿಶೇಷವಾದುದನ್ನು ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಫೈನಲ್‌ನಲ್ಲಿ ಸೋಲಿನ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಲ್ಲದೆ ದೇಶೀ ಟೂರ್ನಿಯಲ್ಲೂ ಸೂರ್ಯಕುಮಾರ್ ಪ್ರದರ್ಶನ ಉತ್ತಮವಾಗಿಲ್ಲ. ಹೀಗಾಗಿ ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ಸಿಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಟಿ20ಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್‌ಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಗುವ ಭರವಸೆ ಇಲ್ಲ. ಅವರು 13 ತಿಂಗಳ ಹಿಂದೆ ಅಂದರೆ ಡಿಸೆಂಬರ್ 2023 ರಲ್ಲಿ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಇದಲ್ಲದೆ, ಅವರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಕಾರಣ, ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ಬಿಸಿಸಿಐನ ಮೊದಲ ಆಯ್ಕೆ ಎಂದು ಹೇಳಲಾಗುತ್ತದೆ. ಅಂದರೆ ಸ್ಯಾಮ್ಸನ್ ಕೂಡ ಏಕದಿನ ತಂಡದ ಯೋಜನೆಯಲ್ಲಿಲ್ಲ.

ಇಶಾನ್ ಕಿಶನ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆದರೆ ಸ್ಯಾಮ್ಸನ್ ಅವರಂತೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಕಾರಣ ಅವರಿಗೂ ಸ್ಥಾನ ಸಿಗುವುದು ಅನುಮಾನ. ಇದಲ್ಲದೆ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ 45 ರ ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ. ಹೀಗಿದ್ದರೂ ಸದ್ಯಕ್ಕೆ ಅವರಿಗೆ ಅವಕಾಶ ಸಿಗುವುದು ಕಷ್ಟ.