Australia vs India, 2nd Test : ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ದಾಂಡಿಗ ಟ್ರಾವಿಸ್ ಹೆಡ್ 111 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಇದು ಟೀಮ್ ಇಂಡಿಯಾ ವಿರುದ್ಧ ಹೆಡ್ ಅವರ ಎರಡನೇ ಟೆಸ್ಟ್ ಶತಕ ಎಂಬುದು ವಿಶೇಷ. ಈ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡದ ಸ್ಕೋರ್ 250 ರ ಗಡಿದಾಟಿದೆ.
ಅಡಿಲೇಡ್ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ದಾಂಡಿಗ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆಡ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 63 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಟ್ರಾವಿಸ್ ಹೆಡ್, ಆ ಬಳಿಕ ಕೂಡ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಹೆಡ್ ಬ್ಯಾಟ್ನಿಂದ 3 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 111 ಎಸೆತಗಳಲ್ಲಿ ಶತಕ ಸಿಡಿಸಿದರು.
ಇದು ಭಾರತದ ವಿರುದ್ಧ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ಅವರ 2ನೇ ಶತಕ. ಇದಕ್ಕೂ ಮುನ್ನ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದರು. ಲಂಡನ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಹೆಡ್ 174 ಎಸೆತಗಳಲ್ಲಿ 163 ರನ್ ಚಚ್ಚಿದ್ದರು. ಇದೀಗ ಮತ್ತೊಮ್ಮೆ ಭಾರತೀಯ ಬೌಲರ್ಗಳ ಬೆಂಡೆತ್ತಿರುವ ಟ್ರಾವಿಸ್ ಹೆಡ್ ಕೇವಲ 111 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಸೆಂಚುರಿಯೊಂದಿಗೆ ಡೇ-ನೈಟ್ ಟೆಸ್ಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಮಾರ್ನಸ್ ಲಾಬುಶೇನ್ ಮೊದಲ ಸ್ಥಾನದಲ್ಲಿದ್ದು, ಪಿಂಕ್ ಬಾಲ್ ಟೆಸ್ಟ್ನಲ್ಲಿ ಮಾರ್ನಸ್ ಒಟ್ಟು 4 ಶತಕ ಬಾರಿಸಿದ್ದಾರೆ. ಇದೀಗ ಮೂರನೇ ಸೆಂಚುರಿಯೊಂದಿಗೆ ಟ್ರಾವಿಸ್ ಹೆಡ್ ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ಟ್ರಾವಿಸ್ ಹೆಡ್ ಅವರ ಈ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡದ ಸ್ಕೋರ್ 250 ರ ಗಡಿದಾಟಿದೆ. ಅಲ್ಲದೆ 75 ಓವರ್ಗಳ ಮುಕ್ತಾಯದ ವೇಳೆಗೆ ಆಸೀಸ್ ಪಡೆ 5 ವಿಕೆಟ್ ಕಳೆದುಕೊಂಡು 273 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.