Australia vs India Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಗೊಳಿಸಿದೆ.
ಅಡಿಲೇಡ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಬಲಗೊಂಡಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಕಬಳಿಸಿ ಆಘಾತ ನೀಡಿದರು. ಪರಿಣಾಮ ಭಾರತ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಕೇವಲ 180 ರನ್ಗಳಿಗೆ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಶೇನ್ (64) ಅರ್ಧಶತಕ ಬಾರಿಸಿದರು. ಇನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಕೇವಲ 141 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 17 ಫೋರ್ಗಳೊಂದಿಗೆ 140 ರನ್ ಚಚ್ಚಿದರು. ಈ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ 337 ರನ್ ಪೇರಿಸಿ ಆಲೌಟ್ ಆಯಿತು.
157 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕರಾದ ಕೆಎಲ್ ರಾಹುಲ್ (7) ಹಾಗೂ ಯಶಸ್ವಿ ಜೈಸ್ವಾಲ್ (24) ಬೇಗನೆ ಔಟಾದರೆ, ಆ ಬಳಿಕ ಬಂದ ಶುಭ್ಮನ್ ಗಿಲ್ (28), ವಿರಾಟ್ ಕೊಹ್ಲಿ (11) ಹಾಗೂ ರೋಹಿತ್ ಶರ್ಮಾ (6) ಬಂದ ವೇಗದಲ್ಲೇ ಹಿಂತಿರುಗಿದರು. ಪರಿಣಾಮ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 175 ರನ್ಗಳಿಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್ನಲ್ಲಿನ 157 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 19 ರನ್ಗಳ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ತಂಡವು 4ನೇ ಓವರ್ನಲ್ಲಿ ಗುರಿ ಮುಟ್ಟುವ ಮೂಲಕ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.
ಪಿಂಕ್ ಬಾಲ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2020 ರಲ್ಲಿ ಅಡಿಲೇಡ್ನಲ್ಲೇ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳಿಂದ ಸೋಲನುಭವಿಸಿತ್ತು. ಇದೀಗ ಮತ್ತೊಮ್ಮೆ ಡೇ-ನೈಟ್ ಟೆಸ್ಟ್ನಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ ಬಗ್ಗು ಬಡಿದಿದೆ.