ಕಾರವಾರ: ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ನಡೆಯುವ ನರಸಿಂಹ ಜಾತ್ರೆ ವೇಳೆ ಸಾವಿರಾರು ಭಕ್ತರು ಭೇಟಿ ನೀಡುವ, ಅರಬ್ಬಿ ಸಮುದ್ರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ದೋಣಿಗಳ ನಿಲುಗಡೆಗೆ ವ್ಯವಸ್ಥಿತ ಜಟ್ಟಿ ನಿರ್ಮಿಸಬೇಕು ಎಂಬ ಜನರ ಬೇಡಿಕೆ ಈವರೆಗೂ ಈಡೇರಿಲ್ಲ.
ತಾಲ್ಲೂಕಿನ ಕಡವಾಡ ಗ್ರಾಮದಿಂದ ನರಸಿಂಹ ದೇವರ ಮೂರ್ತಿಯನ್ನು ದೋಣಿಯ ಮೂಲಕ ಕೊಂಡೊಯ್ದು ದ್ವೀಪದಲ್ಲಿರುವ ಜಾತ್ರಾ ಗದ್ದುಗೆಯಲ್ಲಿ ಕೂರಿಸಿ, ಜಾತ್ರೆ ಆಚರಿಸಲಾಗುತ್ತದೆ. ಈ ಬಾರಿ ಜ.13 ರಂದು ಜಾತ್ರೆ ನಡೆಯಲಿದೆ. ದ್ವೀಪದಲ್ಲಿ ನಡೆಯುವ ಬೆರಳೆಣಿಕೆ ಜಾತ್ರೆಗಳಲ್ಲಿ ಇದು ಒಂದೆನಿಸಿದ್ದು ದೂರದ ಊರುಗಳಿಂದಲೂ ಜನರು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
2019ರಲ್ಲಿ ಜಾತ್ರೆಗೆ ತೆರಳಿದ್ದ ವೇಳೆ ದೋಣಿ ಮಗುಚಿ 16 ಮಂದಿ ಮೃತಪಟ್ಟಿದ್ದರು. ಅಂದಿನಿಂದ ಜಾತ್ರೆಗೆ ತೆರಳುವವರ ಸುರಕ್ಷತೆಗೆ ಆಡಳಿತ ವ್ಯವಸ್ಥೆ ನಿಗಾ ಇಡಲಾರಂಭಿಸಿದೆ.
ಆದರೆ, ದ್ವೀಪದಲ್ಲಿ ದೋಣಿಗಳ ನಿಲುಗಡೆಗೆ ವ್ಯವಸ್ಥೆ ಇಲ್ಲದ ಕಾರಣ ನಡುಗಡ್ಡೆಯಿಂದ 100 ಮೀಟರ್ ದೂರದಲ್ಲಿಯೇ ಪರ್ಸಿನ್ ದೋಣಿಗಳನ್ನು ನಿಲ್ಲಿಸಿ, ಅಲ್ಲಿಂದ ಡಿಂಗಿ ಅಥವಾ ಸಣ್ಣ ದೋಣಿಗಳಲ್ಲಿ ಭಕ್ತರನ್ನು ಕರೆದೊಯ್ದು ದಡಕ್ಕೆ ತಲುಪಿಸಲಾಗುತ್ತಿದೆ.
ಕೂರ್ಮಗಡ ದ್ವೀಪಕ್ಕೆ ಜಾತ್ರೆಯ ಹೊರತಾಗಿಯೂ ಉಳಿದ ದಿನಗಳಲ್ಲಿ ಪ್ರವಾಸಕ್ಕೆ ತೆರಳುವವರು ಇದ್ದಾರೆ. ಆದರೆ, ಜಾತ್ರೆ ಸಮಯದಲ್ಲಿ ಸಾವಿರ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಹೀಗೆ ತೆರಳುವವರು ಬೈತಕೋಲ, ಮಾಜಾಳಿ, ಮುದಗಾ, ಬೇಲೆಕೇರಿ ಬಂದರುಗಳಿಂದ ಪರ್ಸಿನ್, ಟ್ರಾಲರ್ ಬೋಟ್‌ಗಳಲ್ಲಿ ಬರುತ್ತಾರೆ. ಅವುಗಳ ನಿಲುಗಡೆಗೆ ದ್ವೀಪದಲ್ಲಿ ಜಟ್ಟಿ ಇಲ್ಲದ ಕಾರಣ ದೂರದಲ್ಲೇ ನಿಲುಗಡೆ ಮಾಡಬೇಕಾಗುತ್ತಿದೆ’ ಎನ್ನುತ್ತಾರೆ ಕಡವಾಡದ ಗಜಾನನ ಯುವಕ ಮಂಡಳದ ಅಧ್ಯಕ್ಷ ಸುಶಾಂತ ಬೋವಿ.
‘ಮಹಿಳೆಯರು, ವೃದ್ಧರು, ಮಕ್ಕಳನ್ನು ಈ ಬೋಟ್‌ಗಳಿಂದ ಸಣ್ಣ ದೋಣಿಗೆ ಸಾಗಿಸಿ, ಕರೆದೊಯ್ಯವುದು ಸವಾಲಿನ ಕೆಲಸ, ಅಲ್ಲದೇ ಅಪಾಯಕಾರಿಯೂ ಹೌದು. ಒಟ್ಟಿ ನಿರ್ಮಿಸಿದರೆ ದೋಣಿಗಳು ದಡದವರೆಗೂ ತಲುಪಲು ಅನುಕೂಲ ಆಗುತ್ತದೆ’ ಎಂದರು.
ಜಟ್ಟಿ ನಿರ್ಮಾಣ ಯೋಜನೆ ರದ್ದು!
‘ಸಾಗರಮಾಲಾ ಯೋಜನೆ ಅಡಿ ಕೂರ್ಮಗಡ ಕೋಡಿಬಾಗದಲ್ಲಿ ಜಟ್ಟಿ ನಿರ್ಮಾಣಕ್ಕೆ ಯೋಜನೆ ರೂಪಿಸಲು ಮದ್ರಾಸ್ ಐಐಟಿಗೆ ಜವಾಬ್ದಾರಿ ವಹಿಸಿದ್ದರು. ಆದರೆ ಜಟ್ಟಿ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲ ಎಂಬ ಕಾರಣ ನೀಡಿ ವರದಿ ನೀಡಿದ್ದಾಗಿ ಮಾಹಿತಿ ಇದೆ’ ಎಂಬುದಾಗಿ ಬಂದರು ಜಲಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ‘ಮಂಡಳಿಯಿಂದ ಕೂರ್ಮಗಡ ಮತ್ತು ಕೋಡಿಬಾಗದಲ್ಲಿ ಜಟ್ಟಿ ನಿರ್ಮಿಸಲು ಅಂದಾಜು ₹4 ಕೋಟಿ ವೆಚ್ಚದ ಯೋಜನೆಗೆ ಈ ಹಿಂದೆ ನೀಲನಕ್ಷೆ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದ್ದೆವು. ಅದಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆಯಲಿಲ್ಲ’ ಎಂದೂ ವಿವರಿಸಿದರು.