ಹೊನ್ನಾವರ : ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ನೀರಿನ ಮಟ್ಟವು ದಿನೇದಿನೇ ಏರುತ್ತಿದ್ದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಶನಿವಾರ ಪ್ರವಾಹದ ಮೂರನೇ ಮುನ್ನೆಚ್ಚರಿಕೆ ನೀಡಿದೆ.
ಜಲಾಶಯದ ಗರಿಷ್ಠ ಮಟ್ಟವು 1819 ಅಡಿಗಳಾಗಿದ್ದು ಶನಿವಾರ ಜಲಾಶಯದ ನೀರಿನ ಮಟ್ಟ 1811.80 ಅಡಿ ತಲುಪಿದೆ. ಜಲಾಶಯದ ಒಳ ಹರಿವು ಸುಮಾರು 29,000 ಕ್ಯೂಸೆಕ್ಸ್‌ಗಳಿಗಿಂತಲೂ ಅಧಿಕವಾಗಿದ್ದು, ಇದೇ ರೀತಿಯಲ್ಲಿ ನೀರಿನ ಹರಿದು ಬಂದಲ್ಲಿ ಜಲಾಶಯ ಶೀಘ್ರದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ. ಅಣೆಕಟ್ಟೆಯ ಸುರಕ್ಷತಾ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಾದರೂ ಹೊರಬಿಡಲಾಗುವುದು. ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ಎಲ್ಲಾ ನೀರು ಗೇರುಸೊಪ್ಪ ಜಲಾಶಯಕ್ಕೆ ಹರಿದು ಬರುತ್ತದೆ.
ಗೇರುಸೊಪ್ಪ ಜಲಾಶಯವು ನೀರಿನ ಸಂಗ್ರಹವನ್ನು ಗರಿಷ್ಠ ಮಟ್ಟದಲ್ಲಿ ಶೇಖರಿಸಿ ವಿದ್ಯುತ್ ಉತ್ಪಾದಿಸುವ ಜಲಾಶಯವಾದ್ದರಿಂದ ಹಾಗು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಿರುವುದರಿಂದ, ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿಯಾಗಿ ಹೊರಬಿಟ್ಟ ನೀರನ್ನು ಗೇರುಸೊಪ್ಪ ಜಲಾಶಯದಲ್ಲಿ ಸಂಗ್ರಹಿಸಲು ಅವಕಾಶವಿರುವುದಿಲ್ಲ.
ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ವಿನಂತಿಸಿದೆ.